

ಹುಬ್ಬಳ್ಳಿ: ಮಕ್ಕಳ ಪರೀಕ್ಷಾ ಭಯ ಹೋಗಲಾಡಿಸಲು ಸ್ಫೂರ್ತಿ ತುಂಬಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಮೆಟ್ರಿಕ್‌ವರೆಗಿನ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ ಎಂಬ ವಿಷಯವನ್ನು ಶಿಕ್ಷಕರು ಪ್ರೇರಣಾದಾಯಕವಾಗಿ ಮಕ್ಕಳಿಗೆ ಮನದಟ್ಟು ಮಾಡಬೇಕು. ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಧಾರವಾಡ ತಾಲೂಕು ಕಸಾಪ ಅಧ್ಯಕ್ಷ ಮಹಾಂತೇಶ ನರೇಗಲ್ ಅಭಿಪ್ರಾಯಪಟ್ಟರು.
ಧಾರವಾಡದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕನ್ನಡ ಭಾಷಾ ಬೋಧಕರ ಪರಿವಾರದವು ತಯಾರಿಸಿದ ನಾಲ್ಕು ಸೆಟ್ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಶಾಲಾ ಮಕ್ಕಳಿಗಾಗಿ ಪಠ್ಯಾಧಾರಿತ ಚಟುವಟಿಕೆ, ಹಾಡು, ರಸಪ್ರಶ್ನೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕಾರ್ಯಕ್ರಮ ರೂಪಿಸಿದೆ. ಇದರ ಮೂಲಕ ಉತ್ತಮ ಫಲಿತಾಂಶ ಪಡೆಯಲು ಮಕ್ಕಳಿಗೆ ಶಿಕ್ಷಕರು ತಿಳಿಹೇಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂಧಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಪಠ್ಯದೊಂದಿಗೆ ಮೌಲ್ಯ, ಶಿಸ್ತು, ಸಂಸ್ಕೃತಿ ಬೆಳೆಸುವುದು ಮುಖ್ಯ. ಪ್ರಸಕ್ತ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಇಲಾಖೆ ಸಾಕಷ್ಟು ತಯಾರಿ ನಡೆಸುತ್ತಿದೆ ಎಂದರು.
ಇಂಗ್ಲಿಷ್, ಕನ್ನಡ ಭಾಷಾ ಪರಿವೀಕ್ಷಕರಾದ ವಿಜಯಕುಮಾರ ಕರೀಕಟ್ಟಿ ಮಾತನಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡಿವೇರ, ಸಂಪನ್ಮೂಲ ವ್ಯಕ್ತಿ ಡಾ. ಶಿವಾನಂದ ಕಲ್ಲೂರ, ಕನ್ನಡ ಭಾಷಾ ಬೋಧಕರ ಪರಿವಾರದ ಅಧ್ಯಕ್ಷ ಎಚ್.ಎಸ್. ಹೂಗಾರ, ರಾಜೇಶ್ವರಿ ಶೆಟ್ಟಿ, ಶಿವಾನಂದ ಗುಡ್ಡಣ್ಣವರ ಇತರರು ಇದ್ದರು.