

ಮೈಸೂರು: ಸಿರಿಧಾನ್ಯಗಳು ಆಹಾರ ಮಾತ್ರವಲ್ಲದೇ ಔಷಧ ರೂಪದಲ್ಲೂ ಕೆಲಸ ಮಾಡುತ್ತವೆ. ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವ ಸಿರಿಧಾನ್ಯಗಳು ಅಪೌಷ್ಟಿಕತೆ ನಿವಾರಿಸುತ್ತವೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಕಲಾ ಕೂಟ ಹಾಗೂ ಹಿಮಾಲಯ ಪ್ರತಿಷ್ಠಾನದಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಫ್‌ಟಿಆರ್‌ಐ ನಿವೃತ್ತ ವಿಜ್ಞಾನಿ ಪಿ.ಎಸ್. ಬಾಲಕೃಷ್ಣನ್ ರಚಿಸಿರುವ ‘ಸಿರಿಧಾನ್ಯಗಳ ಐಸಿರಿ’ ಕೃತಿ ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಸಿರಿಧಾನ್ಯ ಬೆಳೆಯುವುದರಲ್ಲಿ ಭಾರತವು ವಿಶ್ವದಲ್ಲೆ ಮುಂಚೂಣಿಯಲ್ಲಿದೆ. ಹೆಚ್ಚಿನ ಪೌಷ್ಟಿಕಾಂಶಗಳಿಂದ ಕೂಡಿರುವ ಸಿರಿಧಾನ್ಯಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು, ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಭೂಮಿ ಬಹಳಷ್ಟು ಸತ್ವ ಕಳೆದುಕೊಂಡಿದೆ. ಭೂಮಿಯಲ್ಲಿನ ಸಾವಯವ ಇಂಗಾಲದ ಅಂಶ ಕಡಿಮೆ ಆಗಿದೆ. ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯಬೇಕು ಎಂದರು
ಸಿರಿಧಾನ್ಯಗಳು ಆಹಾರ ಮಾತ್ರವಲ್ಲದೇ ಔಷಧ ರೂಪದಲ್ಲೂ ಕೆಲಸ ಮಾಡುತ್ತದೆ. ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವ ಸಿರಿಧಾನ್ಯಗಳು ಅಪೌಷ್ಟಿಕತೆ ನಿವಾರಿಸುತ್ತವೆ. ಪ್ರಸ್ತುತ ಎಲ್ಲರಿಗೂ ಆಹಾರ ಭದ್ರತೆ ಸಿಕ್ಕಿದೆ. ಆದರೆ ಪ್ರಸ್ತುತ ಸಮಾಜದ ಆರೋಗ್ಯದ ಕಡೆಗೆ ಗಮನಹರಿಸಬೇಕಿದೆ. 140 ಕೋಟಿ ಜನರ ಆರೋಗ್ಯ, ಸದೃಢತೆ ಕಾಪಾಡಬೇಕಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ನಾನು ವೈದ್ಯನಾಗಿಯೂ ಸಾಹಿತಿಯಾಗಿಯೂ, ಸಮಾಜ ಸೇವೆಕನಾಗಿಯೂ ನೋಡಿದಾಗ ಈ ಕೃತಿ ಬಹಳಷ್ಟು ಅದ್ಭುತವಾಗಿದೆ. ಗಾಳಿ ನೀರು ಬೆಳಕು ಅಹಾರ ಮನುಷ್ಯನಿಗೆ ಬೇಕಾಗಿರುವ ಮುಖ್ಯ ಅಂಶವಾಗಿದೆ. ಹಿಂದೆ ಸಿರಿಧಾನ್ಯ ಬಳಸುವ ಪರಂಪರೆ ಇತ್ತು. ಈಗ ಅದು ಮಾಯವಾಗಿದ್ದು, ಮತ್ತೆ ಆ ಪರಂಪರೆ ತರುವ ಕೆಲಸ ಆಗಬೇಕಿದೆ. ಸಮಾಜದಲ್ಲಿ ಸಿರಿಧಾನ್ಯ ಪರಂಪರೆ ಉಳಿಸಿ ಬೆಳೆಸಬೇಕಿದೆ. ಆ ನಿಟ್ಟಿನಲ್ಲಿ ರೈತರು, ವೈದ್ಯರು, ವಿಜ್ಞಾನಿಗಳು ಮಾಡಬೇಕಿದೆ ಎಂದು ಅವರು ಹೇಳಿದರು.
ಸಮಾಜ ಸೇವೆಯಲ್ಲಿಯೂ ತನ್ನದೇ ಆದ ಛಾಪು ಮೂಡಿಸಿರುವ ಪಿ.ಎಸ್. ಬಾಲಕೃಷ್ಣನ್ ರೋಟರಿ ಮಿಡ್ ಟೌನ್ ಅಧ್ಯಕ್ಷರಾಗಿ ಹಾಗೂ ಮೈತ್ರಿ ಚಾರಿಟೆಬಲ್ ಟ್ರಸ್ಟ್ ಮೂಲಕ ವಿಶೇಷ ಮಕ್ಕಳ ಅಭಿವೃದ್ಧಿಗೆ ಶ್ರಮಿಸಿರುವುದು ವಿಶೇಷವೇ ಸರಿ ಎಂದು ಶ್ಲಾಘಿಸಿದರು.
ಕೃತಿ ಕುರಿತು ಆಹಾರ ತಜ್ಞರಾದ ನಂದಿನಿ ಮೂರ್ತಿ ಮಾತನಾಡಿ, ಸಮಾಜಕ್ಕೆ ಏನನ್ನಾದರೂ ಹೊಸತನ್ನು ಕೊಡಬೇಕೆಂಬ ತುಡಿತ ಹೊಂದಿರುವ ಬಾಲಕೃಷ್ಣನ್ ಅವರು ಸಿರಿಧಾನ್ಯಗಳ ಐಸಿರಿ ಕೃತಿಯಲ್ಲಿ ಸಿರಿಧಾನ್ಯಗಳ ಸೇವನೆಯಿಂದ ದೇಹಕ್ಕೆ ಒದಗುವ ಪೋಷಕಾಂಶಗಳು, ಅವುಗಳ ಬಗ್ಗೆ ಸಂಶೋಧನಾತ್ಮಕವಾದ ಬರಹಗಳನ್ನು ನೀಡಿ ಓದುಗರಿಗೆ ಮಹದೋಪಕಾರ ಮಾಡಿದ್ದಾರೆ ಎಂದರು.
ಕೃತಿ ಅತ್ಯಂತ ಸರಳವಾಗಿ, ಆಕರ್ಷಕ ಶೈಲಿಯಿಂದ ಓದುಗರಿಗೆ ಸರಾಗವಾಗಿ ಓದಿಸಿ ಕೊಂಡು ಹೋಗುವ ವೈಶಿಷ್ಟ್ಯತೆಯನ್ನು ಹೊಂದಿದ್ದು, ಒಟ್ಟಾರೆ ಈ ಕೃತಿ ಸಂಗ್ರಹ ಯೋಗ್ಯ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಹಿರಿಯ ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ, ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಭೂಮಿಪುತ್ರ ಸಿ. ಚಂದನ್‌ಗೌಡ, ಸುಧಾ ಬಾಲಕೃಷ್ಣ, ಹಿಮಾಲಯ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎನ್.ಅನಂತ ಇತರರು ಇದ್ದರು.