ಅರ್ಹ ಫಲಾನುಭವಿಗಳು ಸರ್ಕಾರದ ಸೌಲಭ್ಯ ಪಡೆಯಿರಿ: ಸಂಜಯ್

SANJAY JAGIRDAR
SANJAY JAGIRDAR
Published on

ರಾಯಚೂರು ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಪಡೆದರೆ ಮಾತ್ರ ಯೋಜನೆಗಳು ಜಾರಿಗೆ ತಂದಿರುವುದು ಸಾರ್ಥಕವಾಗುತ್ತದೆಂದು ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ವಿವಿಧ ನಿಗಮಗಳಿಂದ ಅನೇಕ ಸೇವೆ, ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಅಲ್ಪಸಂಖ್ಯಾತರ ಕಚೇರಿ ಸೇರಿದಂತೆ ನಿಗಮಕ್ಕೆ ಭೇಟಿ ನೀಡಿ ಯೋಜನೆ, ಸೌಲಭ್ಯಗಳ ಕುರಿತು ಮಾಹಿತಿ ಪಡೆಯಬೇಕು. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಸೌಲಭ್ಯ ಯೋಜನೆಗಳ ಬಗ್ಗೆ ಕರಪತ್ರಗಳನ್ನು ಹಂಚಿ ಫಲಾನುಭವಿಗಳಿಗೆ ಮಾಹಿತಿ ನೀಡುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದರು.

371 (ಜೆ) ಜಾರಿ ಮುಂಚೆ ಈ ಭಾಗದಲ್ಲಿ ವೈದ್ಯರ ಸಂಖ್ಯೆ ಕಡಿಮೆಯಿದ್ದು, 371(ಜೆ) ಜಾರಿ ನಂತರ ವೈದ್ಯರು ಸೇರಿದಂತೆ ಇಂಜಿನಿಯರಗಳ ಸಂಖ್ಯೆ ಹೆಚ್ಚಳವಾಗಿದೆ. ನಿಗಮದ ಕೈಪಿಡಿಯಲ್ಲಿ ಯೋಜನೆ ಕುರಿತು ಮಾಹಿತಿ ಒದಗಿಸಲಾಗಿದ್ದು ಪ್ರತಿಯೊಬ್ಬರೂ ಕೈಪಿಡಿ ಓದಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಉನ್ನತ ಶಿಕ್ಷಣ ಪಡೆದು ಐಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಶಿಕ್ಷಣಕ್ಕಾಗಿ ನಿಗಮದಿಂದ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಒಟ್ಟು 30 ಲಕ್ಷ ರೂಪಾಯಿಗಳಷ್ಟು ಸಹಾಯಧನವನ್ನು ವಿದ್ಯಾಭ್ಯಾಸಕ್ಕಾಗಿ ನೀಡಲಾಗುತ್ತಿದೆ. ಪಿಎಸ್‌ಐ ತರಬೇತಿ ಸಹ ನೀಡಲಾಗುತ್ತಿದೆ. ಅವುಗಳನ್ನು ಅರ್ಹ ಫಲಾನುಭವಿಗಳು ಬಳಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸಂಗಮೇಶ್ ಮಾತನಾಡಿ, ಜಿಲ್ಲೆಯ ವಸತಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ಜತೆಗೆ ಊಟ ಉಪಹಾರವನ್ನು ನೀಡಲಾಗುತ್ತಿದ್ದು, ಕೆಲವೊಂದು ವಸತಿ ಶಾಲೆಯಲ್ಲಿ ಕಾಟ್ಗಳ ಕೊರತೆ ಇದ್ದು ಅದರ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾಹಿತಿ ಕೇಳಿದ್ದಾರೆ. ಶೀಘ್ರದಲ್ಲೇ ಮುಂಬರುವ ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ವಿಸ್ತರಣಾಧಿಕಾರಿ ನರಸಿಂಹ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net