

| ಅನ್ಸಾರ್ ಇನೋಳಿ ಉಳ್ಳಾಲ
ಅವಳಿ ಮಕ್ಕಳನ್ನು ಕಾಣುವುದೇ ಒಂದು ಖುಷಿಯ ವಿಚಾರ. ಇಲ್ಲೊಂದು ಶಿಕ್ಷಣ ಸಂಸ್ಥೆಯಲ್ಲಿ ಬರೋಬ್ಬರಿ 11 ಜೋಡಿ ಅವಳಿ ಮಕ್ಕಳಿದ್ದಾರೆ! ಇದು ಮಂಗಳೂರು ಹೊರವಲಯದ ಕೈರಂಗಳ ಪುಣ್ಯಕೋಟಿ ನಗರದಲ್ಲಿರುವ ಶ್ರೀ ಶಾರದಾ ವಿದ್ಯಾ ಗಣಪತಿ ಶಿಕ್ಷಣ ಸಂಸ್ಥೆಯ ವಿಶೇಷ. ಈ ಅವಳಿಗಳ ಪೈಕಿ 4ನೇ ತರಗತಿಯಲ್ಲಿ 3 ಜೋಡಿ, 5ನೇ ತರಗತಿಯಲ್ಲಿ 2 ಹಾಗೂ 6, 7, 8 ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ತಲಾ 1, ದ್ವಿತೀಯ ಪಿಯುಸಿಯಲ್ಲಿ 2 ಜೋಡಿ ಅವಳಿಗಳಿದ್ದಾರೆ. ಇವರಲ್ಲಿ 4 ಜೋಡಿ ಹೆಣ್ಣು, 4 ಜೋಡಿ ಗಂಡಾದರೆ 3 ಜೋಡಿ ಗಂಡು-ಹೆಣ್ಣು ಮಕ್ಕಳದ್ದಾಗಿದೆ.
ಬಾಕ್ರಬೈಲ್ ನಿವಾಸಿ ಚಂದ್ರಹಾಸ್-ಚೈತನ್ಯಾ ದಂಪತಿ ಮಕ್ಕಳಾದ ಜ್ಞಾನೇಶ್ ಮತ್ತು ಜಯೇಶ್, ಪಡೀಲ್ನ ರಮೇಶ್ ಮತ್ತು ಅಮಿತಾ ದಂಪತಿ ಮಕ್ಕಳಾದ ಸಂಜನಾ-ಸಂಜಯ್, ಕೊಡಕ್ಕಲು ಯುವರಾಜ್-ಸುಮಿತ್ರಾ ದಂಪತಿ ಮಕ್ಕಳಾದ ಲತೇಶ್ ಮತ್ತು ಲವೇಶ್ 4ನೇ ತರಗತಿಯಲ್ಲಿ ಓದುತ್ತಿದ್ದು, ಇವರೆಲ್ಲರೂ ಎಲ್ಕೆಜಿಯಲ್ಲಿ ಸೇರ್ಪಡೆಗೊಂಡವರು.
5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಂಜನಾಡಿಯ ಪುರುಷೋತ್ತಮ-ಪ್ರಭಾವತಿ ದಂಪತಿ ಮಕ್ಕಳಾದ ಚೈತನ್ಯಾ ಪಿ.ಮಲ್ಲಿ ಮತ್ತು ಚಂದನಾ ಪಿ.ಮಲ್ಲಿ ಎಲ್ಕೆಜಿಯಿಂದ ಇದೇ ಶಾಲೆಯಲ್ಲಿದ್ದರೆ, ಬೋಳಿಯಾರ್ನ ರಾಜೇಶ್ ಸುವರ್ಣ-ವಂದಿತಾ ದಂಪತಿ ಮಕ್ಕಳಾದ ಧನ್ಯಶ್ರೀ ಮತ್ತು ಧನುಷ್ ಈ ವರ್ಷ ಸೇರ್ಪಡೆಗೊಂಡವರು. 6ನೇ ತರಗತಿಯಲ್ಲಿರುವ ಕೈರಂಗಳದ ಚಂದ್ರಶೇಖರ-ವಿಶಾಲಾಕ್ಷಿ ದಂಪತಿ ಮಕ್ಕಳಾದ ಭವ್ಯಶ್ರೀ, ದಿವ್ಯಶ್ರೀ ಮೂರನೇ ತರಗತಿಯಲ್ಲಿ ಸೇರಿದ್ದರು. 7ನೇ ತರಗತಿಯಲ್ಲಿರುವ ಬಗಂಬಿಲದ ರಮೇಶ್-ಗಾಯತ್ರಿ ದಂಪತಿ ಮಕ್ಕಳಾದ ಕೀರ್ತಿ ಆರ್.ಗಟ್ಟಿ ಮತ್ತು ಕೀರ್ತನ್ ಆರ್.ಗಟ್ಟಿ ಈ ವರ್ಷದ ಸೇರ್ಪಡೆ. 8ನೇ ತರಗತಿಯಲ್ಲಿರುವ ದೈಗೋಳಿಯ ಶ್ರೀಧರ್-ವಸಂತಿ ದಂಪತಿ ಮಕ್ಕಳಾದ ಸುಜನ್ ಮತ್ತು ಸುಹಾನ್ ಕಳೆದ ವರ್ಷ ಸೇರ್ಪಡೆಗೊಂಡಿದ್ದರು. 10ನೇ ತರಗತಿಯಲ್ಲಿರುವ ಕೊಣಾಜೆ ಪೊಲೀಸ್ ಕ್ವಾರ್ಟರ್ಸ್ನ ಪ್ರಶಾಂತ್ ಜತನ್-ಸುಜಾತಾ ದಂಪತಿ ಮಕ್ಕಳಾದ ಶ್ರೀಶಾಂತ್ ಮತ್ತು ಸುಶಾಂತ್ 8ನೇ ತರಗತಿಗೆ ಪ್ರವೇಶ ಪಡೆದಿದ್ದರು. ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪಜೀರ್ ಗ್ರಾಮದ ದಿವಾಕರ್-ಉಷಾ ದಂಪತಿ ಮಕ್ಕಳಾದ ಪ್ರಜ್ಞಾ ಮತ್ತು ಪ್ರೇಕ್ಷಾ, ಕುರ್ನಾಡ್ನ ಚಂದಪ್ಪ ಕುಲಾಲ್-ವೇದಾವತಿ ದಂಪತಿ ಮಕ್ಕಳಾದ ಮೋಕ್ಷಾ ಮತ್ತು ಮೋಕ್ಷಿತಾ ಪ್ರಥಮ ಪಿಯುಸಿಗೆ ಸೇರ್ಪಡೆಗೊಂಡಿದ್ದರು.
ನಮ್ಮ ವಿದ್ಯಾ ಕೇಂದ್ರವೂ ಶಾರದಾ-ಗಣಪತಿ ಎನ್ನುವ ಅವಳಿ ದೇವರ ಹೆಸರನ್ನೇ ಹೊಂದಿದೆ. 11 ಅವಳಿ ಮಕ್ಕಳು ನಮ್ಮಲ್ಲಿ ಇರುವುದು ಹೆಮ್ಮೆ.
| ಶ್ರೀಹರಿ ಪ್ರಾಂಶುಪಾಲ ಶಾರದಾ ಗಣಪತಿ ವಿದ್ಯಾ ಕೇಂದ್ರ