

ಮಂಡ್ಯ: ಕಳೆದ ಮೂರು ದಿನದಿಂದ ಮಂಡ್ಯ ನಗರದ ಅಕ್ಕಪಕ್ಕದಲ್ಲಿಯೇ ಅಡ್ಡಾಡುತ್ತಿರುವ ಕಾಡಾನೆ ಹಿಂಡು ಮಂಗಳವಾರ ಕಟ್ಟೇದೊಡ್ಡಿ ಬಳಿ ಬೀಡುಬಿಟ್ಟಿತ್ತು. ಇದರಿಂದಾಗಿ ಅರಣ್ಯಾಧಿಕಾರಿ ಕಟ್ಟೆಚ್ಚೆರ ವಹಿಸಿದ್ದು, ಸಾರ್ವಜನಿಕರು ಜಾಗೃತಿಯಿಂದಿರುವಂತೆ ಸೂಚನೆ ನೀಡಲಾಗುತ್ತಿದೆ.
ಭಾನುವಾರ ಹೊಸಬೂದನೂರು, ಸೋಮವಾರ ಚಿಕ್ಕಮಂಡ್ಯ ಸಮೀಪ ದಾಂಗುಡಿ ಇಟ್ಟಿದ್ದ ಗಜಪಡೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ಹಗಲಿನಲ್ಲಿ ಕಾರ್ಯಾಚರಣೆ ನಡೆಸಲು ಆಗದ ಕಾರಣ ಸಂಜೆಯಾಗುತ್ತಿದ್ದಂತೆ ಪ್ರಾರಂಭಿಸಲಾಗುತ್ತಿದೆ. ಅದರಂತೆ ಚಿಕ್ಕಮಂಡ್ಯದಿಂದ ಕಾಡಿಗೆ ಅಟ್ಟುವ ಕೆಲಸ ಮಾಡಿತಾದರೂ ಸುಮಾರು 10 ಕಿ.ಮೀ ಸಮೀಪದ ಕಟ್ಟೇದೊಡ್ಡಿಯಲ್ಲಿ ಮತ್ತೆ ವಾಸ್ತವ್ಯ ಹೂಡಿದವು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದ ಕಾರ್ಯಾಚರಣೆ ಪುನಾರಂಭಗೊಂಡಿದೆ.
ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿಯೇ ಕಾಡಾನೆ ಓಡಾಡುತ್ತಿವೆ. ಆದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಮಂಡ್ಯ ನಗರದೊಳಗೆ ಬಾರದಂತೆ ಎಚ್ಚರ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಆರ್‌ಎಫ್‌ಒ ಹಾಗೂ ಆನೆ ಕಾರ್ಯಪಡೆ ತಂಡದ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಗಜಪಡೆಗಳು ಮುಂದೆ ಸಾಗುತ್ತಿದ್ದಂತೆ ಸಿಬ್ಬಂದಿ ಕೂಡ ಹಿಂದೆಯೇ ಹೋಗುತ್ತಿದ್ದೇವೆ. ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಅಟ್ಟುವವರೆಗೂ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ಎಸಿಎಫ್ ಮಹದೇಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದರು.
ಇಸ್ರೇಲ್ ತಂತ್ರಜ್ಞಾನದ ನೆರವು: ರಾತ್ರಿ ಹೊತ್ತು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಇಸ್ರೇಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಅಂದರೆ ಈ ಮಾದರಿಯಲ್ಲಿ ಡ್ರೋಣ್ ಕ್ಯಾಮೆರಾ ಮೂಲಕ ಆನೆಗಳ ಚಲನ ವಲನ ಕಾಣಿಸುತ್ತಿದೆ. ಪ್ರಮುಖವಾಗಿ ರಾತ್ರಿ ಹೊತ್ತು ದೃಶ್ಯಗಳನ್ನು ಸೆರೆ ಹಿಡಿಯಲು ಹೆಚ್ಚಿನ ಸಹಕಾರಿಯಾಗುತ್ತಿದೆ. ಮಾತ್ರವಲ್ಲದೆ ಇದರಿಂದ ಶಬ್ಧ ಬರುವುದರಿಂದ ಕಾಡಿಗೆ ಅಟ್ಟುವ ಪ್ರಕ್ರಿಯೆಗೆ ನೆರವಾಗುತ್ತಿದೆ. ಇದರೊಟ್ಟಿಗೆ ಅರಣ್ಯಾಧಿಕಾರಿಗಳು ಕೂಡ ತಮ್ಮ ತಂತ್ರವನ್ನು ಬಳಸುತ್ತಿದ್ದಾರೆ.
ಕಟ್ಟೇದೊಡ್ಡಿಯಿಂದ ಮುತ್ತತ್ತಿ ಅರಣ್ಯ ಪ್ರದೇಶಕ್ಕೆ ಸುಮಾರು 60 ಕಿ.ಮೀ ದೂರವಿದೆ. ಇದಕ್ಕಾಗಿ ಮಾರ್ಗವನ್ನು ನಿಗದಿ ಮಾಡಿಕೊಳ್ಳಲಾಗಿದೆ. ಕಾರ್ಯಾಚರಣೆಗೆ ಮುನ್ನ ನಿಗದಿತ ಮಾರ್ಗದಲ್ಲಿ ಎದುರಾಗುವ ಗ್ರಾಮಗಳಲ್ಲಿ ಸಾರ್ವಜನಿಕರು ಸಂಚಾರ ಮಾಡದಂತೆ ಸೂಚನೆ ನೀಡಲಾಗುತ್ತಿದೆ. ಜತೆಗೆ ಆನೆಗಳ ಜೀವಕ್ಕೆ ಹಾನಿಯಾಗಬಾರದೆಂದು ಈ ಮಾರ್ಗದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ.