ಕೊಳ್ಳೇಗಾಲ ಪಟ್ಟಣದಲ್ಲಿ ಇರುಳಿನಲ್ಲಿ ಅಡ್ಡಾಡಿರುವ ಆನೆಗಳು

6-kollegal-3,
ಕೊಳ್ಳೇಗಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಚೆನ್ನಮಲ್ಲಪ್ಪ ಪೆಟ್ರೋಲ್ ಬಂಕ್‌ಗೆ ಆನೆಗಳು ಪ್ರವೇಶ ಮಾಡಿರುವುದು.
Published on

ಕೊಳ್ಳೇಗಾಲ: ಪಟ್ಟಣದ ಬೀದಿಗಳಲ್ಲಿ ಶುಕ್ರವಾರ ಮುಂಜಾನೆ ಗಂಡಾನೆ ಮತ್ತು ಮರಿಯಾನೆ ಪ್ರತ್ಯಕ್ಷವಾಗಿದ್ದು. ಪೆಟ್ರೋಲ್ ಬಂಕ್ ಒಳಗೂ ಅಡ್ಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಪಟ್ಟಣದ ದೇವಾಂಗ ಪೇಟೆ, ಚಿನ್ನದ ಅಂಗಡಿ ಬೀದಿ ಡಾ.ರಾಜ್ ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಚೆನ್ನಮಲ್ಲಪ್ಪ ಪೆಟ್ರೋಲ್ ಬಂಕ್ ಒಳಗೆ ಪ್ರವೇಶ ಮಾಡಿದೆ. ನಂತರ, ಪೊಲೀಸ್ ಠಾಣೆಯ ಮುಂಭಾಗ ತೆರಳಿ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಎರಡು ಆನೆಗಳು ಸಂಚಾರ ನಡೆಸಿವೆ.

ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ಬೀದಿಗಳಲ್ಲಿ ಆನೆಗಳು ಸಂಚಾರ ಮಾಡಿರುವ ವಿಡಿಯೋ ಮಳಿಗೆಗಳು ಹಾಗೂ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮರಾಗಳಲ್ಲಿ ರೇಕಾರ್ಡ್ ಆಗಿದ್ದು, ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೀಕ್ಷಿಸಿದ ಪಟ್ಟಣದ ಜನರು ಕೊಳ್ಳೇಗಾಲಕ್ಕೆ ಆನೆಗಳು ದೌಡಾಯಿಸಿರುವುದನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಈ ಬಗ್ಗೆ ವಿಜಯವಾಣಿಯೊಂದಿಗೆ ಕೊಳ್ಳೇಗಾಲ ಬಫರ್ ವಲಯದ ಆರ್.ಎಫ್.ಒ.ಭರತ್ ಪ್ರತಿಕ್ರಿಯಿಸಿ, ತಲಕಾಡು ಮೂಲದ ಅರಣ್ಯ ಪ್ರದೇಶದಿಂದ ಆನೆಗಳು ತೇರಂಬಳ್ಳಿ, ಮುಳ್ಳೂರು ಗ್ರಾಮಗಳ ಮಾರ್ಗವಾಗಿ ಆಗಮಿಸಿ ಕೊಳ್ಳೇಗಾಲ ಪಟ್ಟಣ ಸೇರಿದೆ ಎಂಬ ಮಾಹಿತಿ ದೊರೆತಿದೆ. .ತಕ್ಷಣವೇ ಕಾರ್ಯಾಚರಣೆ ನಡೆಸಿ, ಆನೆಯನ್ನು ಕಾಡಿನತ್ತ ಕಳುಹಿಸಲು ಯತ್ನಿಸಿದ್ದೇವೆ. ಕೊಳ್ಳೇಗಾಲ ದೇವಾಂಗ ಪೇಟೆ, ರಾಜ್ ಕುಮಾರ್ ರಸ್ತೆ ಹಾಗೂ ಅಂಬೇಡ್ಕರ್ ರಸ್ತೆಯಲ್ಲಿ ಆನೆಗಳು ಸಂಚರಿಸಿದೆ. ನಂತರ, ನರೀಪುರ, ಸರಗೂರು ಗ್ರಾಮದ ಕಡೆಗೆ ಧಾವಿಸಿದೆ. ಆನೆಗಳ ಹೆಜ್ಜೆ ಗುರುತು ಆಧರಿಸಿ ಸುರಕ್ಷಿತವಾಗಿ ಕಾಡಿಗೆ ಕಳುಹಿಸುವ ನಿಟ್ಟಿನಲ್ಲಿ ಕ್ರಮವಹಿಸುತ್ತೇವೆ ಎಂದರು

ಪೊಲೀಸರ ಸಹಕಾರ: ಪಟ್ಟಣಕ್ಕೆ ಆನೆಗಳು ಲಗ್ಗೆ ಇಟ್ಟಿದೆ ಎಂಬ ಮಾಹಿತಿ ತಿಳಿದ ಕೂಡಲೇ ತಡರಾತ್ರಿ ಪಿಎಸ್‌ಐ ವರ್ಷಾ ಹಾಗೂ ಇತರ ಸಿಬ್ಬಂದಿ ಅರಣ್ಯಾಧಿಕಾರಿಗಳ ಜತೆಗೂಡಿ ಆನೆಯನ್ನು ಪಟ್ಟಣದಿಂದ ಹೊರಗಡೆ ಅಟ್ಟುವ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ಆನೆ ಗಳು ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳನ್ನು ಹಿಮ್ಮೆಟ್ಟಿಸಿದ ಪ್ರಸಂಗ ನಡೆದಿದೆ.

ಕಾರ್ಯಾಚರಣೆಯಲ್ಲಿ ಡಿ.ಆರ್.ಎಫ್.ಒ ದೀಪಕ್ ಮಹಾಲಿಗಂ, ಎಂ.ಮಹೇಶ್ ಕುಮಾರ್, ಬೀಟ್ ಫಾರೆಸ್ಟರ್ ಲಿಂಗಣ್ಣ ಹೂಗರ್, ರವಿಕಿರಣ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net