

ಆನೇಕಲ್: ವಣಕನಹಳ್ಳಿಗೆ ಆಹಾರ ಅರಸಿ ಲಗ್ಗೆ ಇಟ್ಟ 5 ಕಾಡಾನೆಗಳು ಇಡೀ ದಿನ ಗ್ರಾಮದಲ್ಲಿ ಆತಂಕ ಸೃಷ್ಟಿ ಮಾಡಿವೆ.
ಭಾನುವಾರ ಬೆಳಗ್ಗೆ ಕಾಡಾನೆಗಳು ಮುತ್ಯಾಲಮಡು ಪ್ರವಾಸಿ ತಾಣದ ಮಾರ್ಗವಾಗಿ ಗ್ರಾಮಕ್ಕೆ ಬಂದಿದ್ದು, ಬೆಳಗ್ಗೆ ಆನೆಗಳು ಹೊಲಗದ್ದೆಗಳಲ್ಲಿ ಇರುವುದನ್ನು ನೋಡಿದ ರೈತರು ಕಾಡಿನತ್ತ ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಆದರೆ ಆನೆಗಳು ನೀಲಗಿರಿ ತೋಪು, ಹೊಲಗದ್ದೆಗಳ ಬಳಿ ಓಡಾಡಿಕೊಂಡು ರಂಪಾಟ ಸೃಷ್ಟಿ ಮಾಡಿವೆ.
ಸುಣವಾರ, ವಣಕನಹಳ್ಳಿ, ಕಾಳನಾಯಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಆನೆಗಳು ಓಡಾಡುತ್ತಿದ್ದಂತೆ ಪಟಾಕಿ ಸಿಡಿಸಿ ಮುತ್ಯಾಲಮಡು ಮೂಲಕ ಕಾಡಿಗೆ ಓಡಿಸಲು ಯತ್ನಿಸಿದ್ದಾರೆ. ಆದರೆ ಆನೆಗಳು ಕಾಡಿನತ್ತ ಮುಖ ಮಾಡದೆ ಹೊಲಗದ್ದೆಗಳಲ್ಲಿ ಬೀಡುಬಿಟ್ಟು, ರಸ್ತೆಗಳ ಮೇಲೂ ಓಡಾಡಿವೆ. ಗ್ರಾಮದಲ್ಲಿ ಆನೆಗಳು ಬಂದಿರುವ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಅಲ್ಲದೆ ಮೊಬೈಲ್‌ನಲ್ಲಿ ಆನೆಗಳ ವಿಡಿಯೋ ತೆಗೆಯಲು ಮುಂದಾದರು. ರಾತ್ರಿಯಾದರೂ ಆನೆಗಳು ಕಾಡಿನತ್ತ ಮುಖ ಮಾಡಲಿಲ್ಲ. 30ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ನೆರವು ಪಡೆದು ಪಟಾಕಿ ಸಿಡಿಸಿ ಆನೆಗಳನ್ನು ಓಡಿಸಲು ಕಾರ್ಯಾಚರಣೆ ನಡೆಸಿದ್ದು, ಕೂಗಾಡಿದ್ದರಿಂದ ಆನೆಗಳು ಕೆಲವು ಕಡೆ ರೋಷಾವೇಶಕ್ಕೆ ಜನರ ಮೇಲೆ ದಾಳಿಗೆ ಯತ್ನಿಸಿದವು. ಆನೇಕಲ್ ಗಡಿಭಾಗದ ಗ್ರಾಮಗಳಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದು, ತರಕಾರಿ ಹಾಗೂ ರಾಗಿ ಬೆಳೆ ಚೆನ್ನಾಗಿ ಸಲು ಬಂದಿದೆ. ಗ್ರಾಮಸ್ಥರು ಬೆಳೆ ನಾಶದ ಆತಂಕದಲ್ಲಿದ್ದಾರೆ. ಆದರೆ ಆನೆಗಳು ಕಾಡಿಗೆ ಹೋಗದೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಓಡಾಡುತ್ತಾ ಇನ್ನಷ್ಟು ಆತಂಕ ಸೃಷ್ಟಿ ಮಾಡಿವೆ.