

ಎನ್.ಆರ್.ಪುರ: ತಾಲೂಕಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ತಾಲೂಕಿನಲ್ಲಿ ಸಂಚರಿಸುತ್ತಿರುವ 10 ರಿಂದ 15 ಆನೆಗಳ ಹಿಂಡು ಜನರ ನಿದ್ದೆಗೆಡಿಸಿದೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ಭದ್ರಾ ಹಿನ್ನೀರಿನ ಸಮೀಪದ ಹಿಳುವಳ್ಳಿ ಗ್ರಾಮದ ತೋಟಗಳಲ್ಲಿ ಕಳೆದ ಐದು ದಿನಗಳಿಂದ ಆನೆಗಳ ಹಿಂಡು ನಿರಂತರವಾಗಿ ದಾಳಿ ಮಾಡಿ, ಬಾಳೆ, ಅಡಕೆ ಗಿಡಗಳನ್ನು ನಾಶ ಮಾಡುತ್ತಿವೆ. ಎನ್.ಆರ್.ಪುರ ತಾಲೂಕಿನ ಸುತ್ತಲೂ ಸುತ್ತುವರಿದಿರುವ ಭದ್ರಾ ಹಿನ್ನೀರಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಆನೆಗಳು ಸುಲಭವಾಗಿ ಭದ್ರಾ ನದಿ ಗಡಿ ದಾಟಿ ಅಕ್ಕಪಕ್ಕದ ತೋಟಗಳಿಗೆ ನುಗ್ಗುತ್ತಿವೆ.
ಆನೆಗಳು ಪ್ರತಿ ನಿತ್ಯ ದಾಳಿ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಹಿಳುವಳ್ಳಿ ಗ್ರಾಮ ಪಟ್ಟಣಕ್ಕೆ ಕೇವಲ ಒಂದು ಕಿ.ಮೀ ದೂರವಿದ್ದು, ಆನೆಗಳನ್ನು ನಿಯಂತ್ರಿಸದಿದ್ದರೆ ಪಟ್ಟಣಕ್ಕೆ ಆನೆಗಳು ಬರುವುದು ನಿಶ್ಚಿತ.
ಈ ಹಿಂದೆ ತಾಲೂಕಿನ ಗ್ರಾಮೀಣ ಭಾಗದ ರೈತರ ನಿದ್ದೆಗೆಡಿಸಿದ್ದ ಆನೆಗಳು, ಪಟ್ಟಣದ ಜನರೂ ನಿದ್ದೆ ಮಾಡದಂತೆ ಮಾಡಿವೆ. ಈ ಆನೆಗಳ ಹಿಂಡು ಸಿಡಿ ಮದ್ದಿಗೂ ಕ್ಯಾರೆ ಎನ್ನುತ್ತಿಲ್ಲ. ಗ್ರಾಮಸ್ಥರೇ ಆನೆಗಳ ಓಡಿಸಲು ಮುಂದಾಗಿದ್ದಾರೆ. ತಾಲೂಕಿನಲ್ಲಿ ಆನೆಗಳು ಮಾಮೂಲಿ ಜಾನುವಾರುಗಳಂತೆ ಆಗಮಿಸುತ್ತಿವೆ. ಜತೆಗೆ ಫೆ.11ರಂದು ಹಿಳುವಳ್ಳಿ ಗ್ರಾಮದ ತೋಟವೊಂದರಲ್ಲಿ ಕಡವೆ ಪ್ರತ್ಯಕ್ಷವಾಗಿರುವುದು ಜನರಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ಕೆಲವು ತಿಂಗಳ ಹಿಂದಷ್ಟೇ ಪಟ್ಟಣದ ಮುಖ್ಯರಸ್ತೆಯಲ್ಲಿಯೇ ಕಾಡುಕೋಣಗಳ ಹಿಂಡು ದಾರಿಯಲ್ಲಿ ಹೋಗಿರುವುದು ಜನರನ್ನು ಭಯಗಳಿಸಿವೆ.
ಕಾಡುಪ್ರಾಣಿ ಹಾಗೂ ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಗಂಭೀರವಾಗಿ ಪಸರಿಗಣಿಸಿಲ್ಲ. ಆನೆಗಳನ್ನ ಓಡಿಸಲು ಇಲಾಖೆ ಕ್ರಮಕೈಗೊಳ್ಳದಿರುವುದು ವಿರ್ಪಯಾಸ.