

ಹಾವೇರಿ: ಕಾಡುಪ್ರಾಣಿಗಳು ನಾಡಿಗೆ ಬರುವ, ಬೆಳೆ ಹಾಳು ಮಾಡುವ, ಜನರನ್ನು ಆತಂಕಕ್ಕೆ ಒಡ್ಡುವ ಪ್ರಕರಣಗಳು ಪದೇಪದೆ ನಡೆಯುತ್ತಿದ್ದು, ಆ ಪಟ್ಟಿಗೆ ಈಗ ಮತ್ತೊಂದು ಸೇರ್ಪಡೆ ಆಗಿದೆ. ಆನೆಗಳ ಹಿಂಡು ನಾಡಿಗೆ ಆಗಮಿಸಿದ್ದು, ಸುತ್ತಮುತ್ತಲ ಹಳ್ಳಿಗಳ ಜನರನ್ನು ಆತಂಕಕ್ಕೆ ಈಡುಮಾಡಿದೆ.
ಆಹಾರ ಅರಸಿಕೊಂಡು ನಗರ ಪ್ರದೇಶಕ್ಕೆ ಆಗಮಿಸಿರುವ ಈ ಆನೆಗಳ ಹಿಂಡು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿನ ಮೂರಾರ್ಜಿ ವಸತಿ ಶಾಲೆ ಬಳಿ ಬೀಡು ಬಿಟ್ಟಿವೆ. ಶುಕ್ರವಾರ ರಾತ್ರಿಯೇ ಇವು ಯಲ್ಲಾಪುರ ಅರಣ್ಯದಿಂದ ಆಹಾರ ಹುಡುಕುತ್ತ ದುಂಡುಸಿ ವಲಯದ ಕಾಡಿಗೆ ಬಂದಿವೆ. ತಾಲೂಕಿನ ಚಂದಾಪುರ, ಜೇಕಿನಕಟ್ಟಿ ಹಾಗೂ ಇತರ ತಾಂಡಗಳ ಸುತ್ತಮುತ್ತ ಆನೆಗಳು ತಿರುಗಾಡುತ್ತಿವೆ.
ಗೋವಿನ ಜೋಳ, ಕಬ್ಬು ಬೆಳೆಗಳನ್ನು ಈ ಆನೆಗಳ ಹಿಂಡು ತಿಂದು ಹಾಳು ಮಾಡಿವೆ. ಅವುಗಳನ್ನು ಬೇಗ ಕಾಡಿಗೆ ಸೇರಿಸಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ದುಂಡಸಿ ವಲಯ ಅರಣ್ಯಾಧಿಕಾರಿ ರಮೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ರಾತ್ರಿ ವೇಳೆ ಜನರು ಹೊರಗೆ ಬಾರದಂತೆ ಎಚ್ಚರಿಕೆ ನೀಡಿದ್ದಾರೆ. ಆನೆಗಳನ್ನು ಓಡಿಸಲು ಸುಡುಮದ್ದುಗಳನ್ನು ಸಿಡಿಸಲಾಗುತ್ತಿದ್ದರೂ, ಅವುಗಳು ಇನ್ನೂ ಅಲ್ಲೇ ಇರುವುದರಿಂದ ಸ್ಥಳೀಯರು ಆತಂಕದಲ್ಲೇ ಕಾಲಕಳೆಯುತ್ತಿದ್ದಾರೆ.
ಆನೆಗಳ ಹಿಂಡನ್ನು ವೀಕ್ಷಿಸಲು ಈ ಲಿಂಕ್ ಕ್ಲಿಕ್ಕಿಸಿ: https://www.facebook.com/VVani4U/videos/1498639700341942