ಅವರೆಕಾಯಿ ಕೀಳಲು ಹೋದಾಕೆಗೆ ಮೃತ್ಯುವಾಗಿ ಬಂದ ಆನೆ

ಆನೆ
ಚನ್ನಗಿರಿಯಲ್ಲಿ ತಾಲೂಕಿನಲ್ಲಿ ದಾಳಿ ಮಾಡಿರುವ ಆನೆ
Published on

ಚನ್ನಗಿರಿ: ತಾಲೂಕಿನ ಸೋಮ್ಲಾಪುರದಲ್ಲಿ ಅವರೆಕಾಯಿ ಕೀಳಲು ಜಮೀನಿಗೆ ಹೋಗಿದ್ದ ಯುವತಿ ಮೇಲೆ ಶನಿವಾರ ಆನೆ ದಾಳಿ ನಡೆಸಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆಯೂ ಆನೆ ದಾಳಿ ನಡೆಸಿದ್ದು ಘಟನೆಯಲ್ಲಿ ಒಟ್ಟಾರೆ ಆರು ಮಂದಿ ಗಾಯಗೊಂಡಿದ್ದಾರೆ. ಮತ್ತೆ ಶುರುವಾದ ಕಾಡಾನೆ ಉಪಟಳ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಸೋಮ್ಲಾಪುರ ಗ್ರಾಮದ ಕವನ (೧೭) ಮೃತ ಯುವತಿ. ಉಮೇಶ, ಮಂಜುಳಾ, ಕಾಶೀಪುರ ಗ್ರಾಮದ ಬಾಬನಾಯ್ಕ, ಬೂಮಲ್ಯ ನಾಯ್ಕ, ಲಕ್ಷ್ಮೀಬಾಯಿ, ಶಾಂತಿಬಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ

ಕವನಾ ಬೆಳಗ್ಗೆ ಪಾಲಕರಾದ ಉಮೇಶ, ಮಂಜುಳಾ ಜತೆಗೆ ಅವರೆಕಾಯಿ ಕೀಳಲು ಜಮೀನಿಗೆ ಹೋಗಿದ್ದಳು. ಆಗ ಹಿಂದಿನಿಂದ ಬಂದ ಆನೆ ದಾಳಿ ನಡೆಸಿದೆ. ಕವನ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಅವರ ತಂದೆ ಉಮೇಶ, ತಾಯಿ ಮಂಜುಳಾಗೆ ತೀವ್ರ ಗಾಯಗಳಾಗಿದೆ.

ಸೋಮ್ಲಾಪುರದಿಂದ ಕಾಶೀಪುರ ಗ್ರಾಮದ ಕಡೆ ನಡೆದ ಆನೆ ಅಲ್ಲಿ ಕೆಲಸ ಮಾಡುತ್ತಿದ್ದವರ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ. ಎಲ್ಲರನ್ನೂ ದಾವಣಗೆರೆ ಸಿಜಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ಕಾಶೀಪುರ ಗ್ರಾಮದಿಂದ ಆನೆ ಸೂಳೆಕೆರೆಗೆ ತೆರಳಿ ನೀರಿನಲ್ಲಿ ಆಟವಾಡಿದೆ. ತಕ್ಷಣ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಆನೆಯನ್ನು ಕಾಡಿಗೆ ಓಡಿಸುವ ಪ್ರಯತ್ನ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net