

ನಾಪೋಕ್ಲು: ಸಮೀಪದ ಕಕ್ಕಬ್ಬೆ ಪಾಡಿ ಇಗ್ಗುತ್ತಪ್ಪ ದೇವಾಲಯದ ಬಳಿ ಕಾಡಾನೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕಕ್ಕಬ್ಬೆ ಗ್ರಾಮಗಳಲ್ಲಿ ಕಾಡಾನೆಗಳಿಂದ ಕೃಷಿ ಫಸಲು ನಿರಂತರವಾಗಿ ಹಾನಿಗೊಳಗಾಗುತ್ತಿದ್ದು, ರೈತರು ಆತಂಕಗೊಂಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ಬುಧವಾರ ರಾತ್ರಿ ಕಾಡಾನೆಯೊಂದು ಆಹಾರ ಅರಸಿ ಬಂದು ಪಾಡಿ ಇಗ್ಗುತ್ತಪ್ಪ ದೇವಾಲಯದ ಬಳಿ ತಿರುಗಾಡಿದೆ. ನಂತರ ದೇವಾಲಯದ ಮುಖ್ಯದ್ವಾರದ ಸಮೀಪ ದೇವರ ಕಟ್ಟೆಯಲ್ಲಿರುವ ಹಲಸಿನ ಮರದಿಂದ ಹಲಸಿನ ಹಣ್ಣುಗಳನ್ನು ಕೆಳಗೆ ಬೀಳಿಸಿ ತಿಂದು ಹಿಂತಿರುಗಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಯವಕಪಾಡಿ ಗ್ರಾಮದ ಕುಡಿಯರ ಕಾಲನಿಯ ನಿವಾಸಿ ಕುಡಿಯರ ಬಿದ್ದಪ್ಪ ಮನೆ ಮೇಲೆ ಮಂಗಳವಾರ ಕಾಡಾನೆಯೊಂದು ತೆಂಗಿನ ಮರವನ್ನು ಬೀಳಿಸಿ ಮನೆಗೆ ಹಾನಿ ಉಂಟು ಮಾಡಿತ್ತು. ವರ್ಷದ ಹಿಂದೆ ದೇವಸ್ಥಾನದ ಸಮೀಪದ ಕಂಬೇಯಂಡ ರಾಜ ಅವರು ಆನೆ ದಾಳಿಯಿಂದ ಮೃತಪಟ್ಟಿದ್ದು ಇವರ ತಮ್ಮ ಅನು ಆನೆ ತುಳಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಲ್ಲಿಯ ವಾಟೆಕಾಡಿನ ನಿವಾಸಿ ದೇವಯ್ಯ ಆಟೋರಿಕ್ಷವನ್ನು ಜಖಂಗೊಳಿಸಿದ ಘಟನೆಯು ಜರುಗಿತ್ತು. ನಾಲ್ಕು ನಾಡು ವ್ಯಾಪ್ತಿಯಲ್ಲಿ ಕಾಡಾನೆಗಳ ನಿರಂತರ ಉಪಟಳದಿಂದ ರೈತರು ನಷ್ಟ ಅನುಭವಿಸುತ್ತಿರುವುದರ ಜತೆಗೆ ಜೀವ ಭಯ ಹೆಚ್ಚಾಗಿದೆ. ಇನ್ನಷ್ಟು ಜೀವ ಹಾನಿ, ಕಷ್ಟ ನಷ್ಟಗಳು ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.