ಆನೆ ದಂತ ಸಾಗಣೆ, ಇಬ್ಬರ ಬಂಧನ

01012012
Published on

ಬೆಳಗಾವಿ: ಆನೆದಂತಗಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬೆಳಗಾವಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಶನಿವಾರ ರಾತ್ರಿ ಬಂಧಿಸಿದ್ದು, ಏಳು ದಂತ ವಶಪಡಿಸಿಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಗುಟಗುದ್ದಿ ಗ್ರಾಮದ ಲಗಮಣ್ಣ ಯಲ್ಲಪ್ಪ ನಾಯಿಕ (26) ಹಾಗೂ ಬೆಳಗಾವಿಯ ಮಾರ್ಕಂಡೇಯ ನಗರದ ಮಲ್ಲಪ್ಪ ಬಾಳಪ್ಪ ದೂಳಪ್ಪಗೋಳ (38) ಬಂಧಿತರು.

ಹೊಸವಂಟಮೂರಿ ಗ್ರಾಮದಲ್ಲಿ ಆನೆದಂತ ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ, ಸಿಬ್ಬಂದಿಯೊಂದಿಗೆ ಶನಿವಾರ ತಡರಾತ್ರಿ ದಾಳಿ ನಡೆಸಿ ಆನೆದಂತ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.

ಬಂಧಿತರಿಂದ 3.5 ರಿಂದ 4 ಅಂಗುಲ ಅಳತೆಯ, 290 ಗ್ರಾಂನಿಂದ 410 ಗ್ರಾಂ ತೂಕದ ಒಟ್ಟು ಏಳು ದಂತ ವಶಪಡಿಸಿಕೊಂಡು, ಬೆಳಗಾವಿ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಅರಣ್ಯ ಸಂಚಾರಿ ದಳದ ಆರ್.ಜೆ. ಯರನಾಳ, ಎಸ್.ಆರ್. ಆರಿಬೆಂಚಿ, ಕೆ.ಡಿ. ಹಿರೇಮಠ ಹಾಗೂ ಬಿ.ಬಿ. ಇಂಗಳಗಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net