26 ಆನೆಗಳನ್ನು ಕಾಡಿಗಟ್ಟಿದ ಅರಣ್ಯ ಸಿಬ್ಬಂದಿ

ಚಿತ್ರ 28ಎಸ್ ಡಿ ಪಿ 01
Published on

ಸಿದ್ದಾಪುರ: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಅಪಾರ ಪ್ರಮಾಣದ ಬೆಳೆ ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡಿದ್ದ 26 ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಿಟಿ ಮಂಗಳವಾರ ಕಾಡು ವ್ಯಾಪ್ತಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಲ ದಿನಗಳಿಂದ ಗುಯ್ಯ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಠಿಕಾಣಿ ಹೂಡಿದ್ದವು. 6 ಮರಿಯಾನೆಗಳೊಂದಿಗೆ 25ಕ್ಕೂ ಹೆಚ್ಚು ಕಾಡಾನೆಗಳು ರಾತ್ರಿ, ಹಗಲಿನಲ್ಲೂ ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಕಾಡಾನೆ ಹಾವಳಿಯಿಂದ ಕಾರ್ಮಿಕರು, ಬೆಳೆಗಾರರು ತೋಟಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಡಿಸಿಎಫ್ ಜಗನ್ನಾಥ್, ಎಸಿಎಫ್ ನೆಹರು ಅವರ ಮಾರ್ಗದರ್ಶನದೊಂದಿಗೆ ವಲಯ ಅರಣ್ಯ ಅಧಿಕಾರಿ ದೇವಯ್ಯ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಸಂಜಿತ್ ಸೋಮಯ್ಯ ಸೇರಿದಂತೆ ಆರ್‌ಆರ್‌ಟಿ ಸಿಬ್ಬಂದಿ ಆನೆಗಳನ್ನು ಗ್ರಾಮದಿಂದ ಓಡಿಸಲು ಯಶಸ್ವಿಯಾಗಿದ್ದಾರೆ.
ಆನೆಗಳು ವಿರಾಜಪೇಟೆ ಸಿದ್ದಾಪುರ ಮುಖ್ಯರಸ್ತೆಯ ಇಂಜಲಗೆರೆ ಬಳಿ ರಸ್ತೆ ದಾಟಲು ಹಿಂದೇಟು ಹಾಕುತ್ತಿದ್ದ ಸಂದರ್ಭ ಕೆಲಕಾಲ ವಾಹನಗಳನ್ನು ತಡೆಹಿಡಿದು ಆನೆಗಳನ್ನು ಬಿಟಿ ಕಾಡು ವ್ಯಾಪ್ತಿಯ ಮೂಲಕ ಅಟ್ಟಲಾಗಿದ್ದು ರಾತ್ರಿ ಅರಣ್ಯಕ್ಕೆ ಸೇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net