

ಗೋಣಿಕೊಪ್ಪಲು: ನವರಾತ್ರಿ ಅಂಗವಾಗಿ ಹತ್ತು ದಿನಗಳ ಕಾಲ ನಡೆಯಲಿರುವ ಗೋಣಿಕೊಪ್ಪ ದಸರಾ ಜನೋತ್ಸವ ಕಾರ್ಯಕ್ರಮವು ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಜರುಗಬೇಕು, ಇಲಾಖೆಯ ಅಧಿಕಾರಿಗಳು ಸಂಪೂರ್ಣವಾಗಿ ಪಾಲ್ಗೊಳ್ಳುವ ಮೂಲಕ ಗೋಣಿಕೊಪ್ಪ ದಸರಾ ಜನೋತ್ಸವ ಅರ್ಥಪೂರ್ಣವಾಗಿ ನಡೆಯುವಂತಾಗಬೇಕೆಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ. ಎಸ್.ಪೊನ್ನಣ್ಣ ನಿರ್ದೇಶನ ನೀಡಿದರು.
ತಾಲೂಕು ಆಡಳಿತಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಗೋಣಿಕೊಪ್ಪ ಕಾವೇರಿ ದಸರಾ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಈ ಬಾರಿ ಜನೋತ್ಸವ ಕಾರ್ಯಕ್ರಮ ಅತ್ಯಂತ ವಿಭಿನ್ನವಾಗಿ ಕೂಡಿರಬೇಕು. ನಾಡಿನ ಕಲೆ, ಸಂಸ್ಕೃತಿಗೆ ಒತ್ತು ನೀಡುವಂತಿರಬೇಕು. ಸ್ತಬ್ಧಚಿತ್ರ ಮೆರವಣಿಗೆ ಸಂದರ್ಭ ಆರಂಭದಲ್ಲಿ ಆನೆಗಳ ಮೆರವಣಿಗೆ ನಡೆಯಲಿದೆ. ವಿವಿಧ ಇಲಾಖೆಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಮಾಹಿತಿಯನ್ನು ಸ್ತಬ್ಧಚಿತ್ರಗಳ ಮೂಲಕ ಬಿಂಬಿಸಬೇಕು, ದಶಮಂಟಪ ಸಂಚರಿಸುವ ರಸ್ತೆ ಮಾರ್ಗಗಳ ಗುಂಡಿ ಮುಚ್ಚಿಸಬೇಕು, ವಿದ್ಯುತ್ ತಂತಿಗಳು ಮಂಟಪಕ್ಕೆ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ದಸರಾ ಜನೋತ್ಸವ ಯಶಸ್ವಿಯಾಗಿ ಜರುಗಲು ತಮ್ಮ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಂತೆ ಸೂಚನೆ ನೀಡಿದರು.
ನಾಡಹಬ್ಬ ದಸರಾ ಸಮಿತಿಯ ಪ್ರಭಾಕರ್ ನೆಲ್ಲಿತ್ತಾಯ, ಕೊಲ್ಲಿರ ಗೋಪಿ ಚಿಣ್ಣಪ್ಪ ಭಗವತಿ ದಸರಾ ಸಮಿತಿಯ ಜಮ್ಮಡ ಅರಸು, ಸರ್ವರ ದಸರಾ ಸಮಿತಿಯ ಗೋವಿಂದಪ್ಪ ಸ್ನೇಹಿತರ ಬಳಗ ಕೊಪ್ಪ ಸಮಿತಿಯ ಕಾಡ್ಯಮಾಡ ಚೇತನ್ ಪ್ರತಿ ವರ್ಷವೂ ವಿದ್ಯುತ್ ತಂತಿಯ ಸಮಸ್ಯೆ, ಗುಂಡಿಬಿದ್ದ ರಸ್ತೆಯಿಂದ ಮಂಟಪಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಗಮನ ಸೆಳೆದರು.
ಸ್ತಬ್ಧಚಿತ್ರ ಮೆರವಣಿಗೆಗೆ ಎರಡು ಆನೆಗಳು ಬೇಕೆಂದು ಗೋಪಿಚಿಣ್ಣಪ್ಪ ಶಾಸಕರ ಮುಂದೆ ಅಭಿಪ್ರಾಯ ಮಂಡಿಸಿದರು. ಅಲ್ಲದೇ ಹೆಚ್ಚು ಅನುದಾನ ನೀಡುವಂತೆ ಒತ್ತಾಯಿಸಿದರು.
ವಿವಿಧ ದಶ ಮಂಟಪಗಳ ಮುಖ್ಯಸ್ಥರ ಮಾತು ಆಲಿಸಿದ ಶಾಸಕ ಎ.ಎಸ್.ಪೊನ್ನಣ್ಣ, ಸ್ಥಳದಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಸಭೆಯಲ್ಲಿ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ತಹಸೀಲ್ದಾರ್ ಪ್ರಶಾಂತ್, ಇಒ ಕೆ.ಸಿ.ಅಪ್ಪಣ್ಣ, ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳಾದ ಡಾ.ಯತಿರಾಜ್, ಮಹದೇವ್, ಗೋಪಾಲ್, ನೀಲ್ ಶೆಟ್ಟಿ, ಗೋವಿಂದರಾಜು, ಸುಧೀಂದ್ರ, ಪ್ರೀತಿ ಚಿಕ್ಕಮಾದು, ರೀಣಾ, ಪ್ರಕಾಶ್, ಕಾವೇರಿ ದಸರಾ ಸಮಿತಿಯ ಉಪ ಸಮಿತಿಯ ಪದಾಧಿಕಾರಿಗಳಾದ ಅಂಕಿತ್ ಪೊನ್ನಪ್ಪ, ಶೀಲಾ ಬೋಪಣ್ಣ, ರಮೇಶ್, ಶಿವಾಜಿ ಇನ್ನಿತರು ಉಪಸ್ಥಿತರಿದ್ದರು.