

ಸುಬ್ರಹ್ಮಣ್ಯ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ಮಂಗಳವಾರ ವಿದ್ಯುತ್ ಆಘಾತದಿಂದ ಕಾಡಾನೆ ಮೃತಪಟ್ಟಿದೆ.
ಮುಂಜಾನೆ ಆಹಾರ ಅರಸುತ್ತ ಪುತ್ತಿಲ ಕಾಡಿಗೆ ಬಂದ 35ರಿಂದ 40 ವರ್ಷದ ಪ್ರಾಯದ ಗಂಡು ಕಾಡಾನೆ ಅಲ್ಲಿದ್ದ ಬೈನೆ ಮರವನ್ನು ಎಳೆದಾಗ ಮರದ ಗರಿಗಳು ತುಂಡಾಗಿ ಅಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ಆನೆ ಸ್ಥಳದಲ್ಲೇ ಮೃತಪಟ್ಟಿತು.
ಸುಳ್ಯ ಎಸಿಎಫ್ ಆಸ್ಟಿನ್ ಸೋನ್ಸ್ ನೇತೃತ್ವದಲ್ಲಿ ಕಡಬ ಪಶು ವೈದ್ಯಾಧಿಕಾರಿಗಳು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಅರಣ್ಯಾಧಿಕಾರಿಗಳ ಸಮ್ಮುಖ ಆನೆಯನ್ನು ದಹನ ಮಾಡಲಾಯಿತು.
ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಆನೆಗಳು ಕೃಷಿ ತೋಟಗಳಿಗೆ ಲಗ್ಗೆಯಿಟ್ಟು ಹಾನಿ ಮಾಡುತ್ತಿವೆ. ಆನೆಗಳ ಹಾವಳಿ ತಪ್ಪಿಸಲು ಮತ್ತು ವಿದ್ಯುತ್ ತಂತಿಗಳು ಹಾದು ಹೋಗುವ ಪ್ರದೇಶಗಳಿಗೆ ಆನೆಗಳು ಪ್ರವೇಶಿಸದಂತೆ ಆನೆ ಕಂದಕ ನಿರ್ಮಿಸುವಂತೆ ಅರಣ್ಯಾಧಿಕಾರಿಗಳಲ್ಲಿ ಗ್ರಾಮಸ್ಥರು ವಿನಂತಿಸಿದರು.
ಆನೆ ಸಾವಪ್ಪಿದ ಸುದ್ದಿ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಆನೆಗೆ ಭಕ್ತಿ ಭಾವದಿಂದ ನಮಿಸಿದರು. ಅಗರಬತ್ತಿ ಹಚ್ಚಿ, ಆರತಿ ಬೆಳಗಿದರು.