

ಹನೂರು : ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಪಾಲಾರ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ 35 ವರ್ಷದ ಹೆಣ್ಣಾನೆಯೊಂದರ ಕಳೇಬರ ಪತ್ತೆಯಾಗಿದೆ. ಅರಣ್ಯ ಪ್ರದೇಶದ ದೊಡ್ಡಹಳ್ಳದಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಆನೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಎಸಿಎಫ್ ಮನೋಹರ್ ಸ್ವಪ್ನಿಲ್ ಅಹಿರೆ ಹಾಗೂ ಅಧಿಕಾರಿಗಳು
ಭೇಟಿ ನೀಡಿ ಆನೆ ಕಳೇಬರ ಪರಿಶೀಲನೆ ನಡೆಸಿದರು. ಬಳಿಕ ಪಶು ವೈದ್ಯಾಧಿಕಾರಿ ಡಾ. ಆದರ್ಶ ಮರಣೋತ್ತರ ಪರೀಕ್ಷೆ ನಡೆಸಿದರು. ಮೇಲ್ನೋಟಕ್ಕೆ ಆನೆ ಸ್ವಾಭಾವಿಕವಾಗಿ ಮೃತಪಟ್ಟಿದೆ ಎಂದು ತಿಳಿದು ಬಂದಿದ್ದರೂ ನಿಖರ ಕಾರಣಗಳು ವರದಿಯಿಂದ ದೃಢವಾಗಬೇಕಿದೆ.
ಗಸ್ತು ಹೆಚ್ಚಳಕ್ಕೆ ಒತ್ತಾಯ: ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಮಿಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳ ಸಾವಿಗೆ ಸಿಬ್ಬಂದಿ ಗಸ್ತಿನ ಕೊರತೆಯೂ ಒಂದು ಕಾರಣವಾಗಿದೆ. ಹಾಗೆಯೇ ರಾಮಾಪುರ ಅರಣ್ಯ ಪ್ರದೇಶದಲ್ಲಿ ಕಳೆದ ತಿಂಗಳು ಒಂದು ಚಿರತೆ ಮೃತಪಟ್ಟಿದೆ. ಇದೀಗ ಪಾಲಾರ್ ಅರಣ್ಯ ಪ್ರದೇಶದಲ್ಲಿ ಹೆಣ್ಣಾನೆ ಮೃತಪಟ್ಟಿದ್ದು, ಸುಮಾರು ಮೂರ‌್ನಾಲ್ಕು ದಿನಗಳು ಕಳೆದಿದೆ ಎನ್ನಲಾಗಿದೆ. ಸಮರ್ಪಕ ಗಸ್ತು ಇಲ್ಲದ ಪರಿಣಾಮ ವನ್ಯ ಪ್ರಾಣಿಗಳ ಸಾವು
ಹೆಚ್ಚಾಗುತ್ತಿದೆ. ಹಾಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಗತ್ಯ ಸಿಬ್ಬಂದಿ ನಿಯೋಜಿಸುವ ಮೂಲಕ ಗಸ್ತು ಹೆಚ್ಚಿಸುವಂತೆ ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.