

ಮಡಿಕೇರಿ:
ಕೊಡಗಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ಮಡಿಕೇರಿ ವನ್ಯಜೀವಿ ವಿಭಾಗದ ಕೊಡಗು ವೃತ್ತದ ವತಿಯಿಂದ ಹಾರಂಗಿ ಸಾಕಾನೆ ಶಿಬಿರದಲ್ಲಿ ಶನಿವಾರ ನಡೆದ ವಿಶ್ವ ಆನೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ರಾಜ್ಯ ಸರ್ಕಾರ ಕೆಲವು ರಾಜ್ಯಗಳ ಪ್ರಮುಖರ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿದ್ದು, ಆನೆ ಮಾನವ ಸಂಘರ್ಷಕ್ಕೆ ವೈಜ್ಞಾನಿಕವಾಗಿ ಪರಿಹಾರ ಕಂಡುಹಿಯುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆನೆಗಳಲ್ಲಿ ಎರಡು ವಿಧಗಳಿವೆ. ಕಾಡಿನಲ್ಲೇ ವಾಸಿಸುವ ಕಾಡಾನೆಗಳದ್ದು ಒಂದು ವಿಧವಾದರೆ, ತೋಟದಲ್ಲಿ ಸಿಗುವ ವಿವಿಧ ರೀತಿಯ ಹಣ್ಣುಗಳನ್ನು ಮತ್ತು ಬೆಳೆದ ಫಸಲು ತಿಂದು ಕೆರೆಯ ನೀರನ್ನು ಕುಡಿಯುತ್ತಾ ತೋಟದಲ್ಲಿ ಬೀಡು ಬೀಡುವ ತೋಟದ ಆನೆಗಳು ಮತ್ತೊಂದು ವಿಧ. ಇದರಿಂದ ರೈತರು ಬೆಳೆದ ಫಸಲು ಮತ್ತು ಕೆಲವೊಮ್ಮೆ ಜೀವವನ್ನು ಕೂಡ ಕಳೆದುಕೊಳ್ಳುವ ಸ್ಥಿತಿ ಬರುತ್ತದೆ.
ಸರ್ಕಾರ ನನ್ನನ್ನು ವನ್ಯಜೀವಿ ಮಂಡಳಿ ಸದಸ್ಯನಾಗಿ ನೇಮಕ ಮಾಡಿದ್ದು, ನನ್ನ ಅಧಿಕಾರದ ಅವಧಿಯಲ್ಲಿ ಈ ಎಲ್ಲಾ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಪರಿಹಾರ ನೀಡುವ ಪ್ರಯತ್ನ ಮಾಡುತ್ತೆನೆ ಎಂದರು. ದುಬಾರೆ ಆನೆ ಶಿಬಿರದ ಪಶು ವೈದ್ಯಾಧಿಕಾರಿ ಡಾ. ಚೆಟ್ಟಿಯಪ್ಪ ಆನೆಗಳ ಕುಟುಂಬದ ಮಾದರಿ ಮತ್ತು ಆವಾಸಸ್ಥಾನಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಆನೆಗಳ ಬಗ್ಗೆ ಮತ್ತು ಕೊಡಗಿನಲ್ಲಿನಲ್ಲಿರುವ ಸಾಕಾನೆ ಶಿಬಿರಗಳ ಬಗ್ಗೆ ಮಾಹಿತಿ ನೀಡಿದರು.
ಅರಣ್ಯ ಅಧಿಕಾರಿಗಳಾದ ಸಂದೀಪ್ ಪಿ., ಅಭಯಂಕರ್, ಸೈಯದ್ ಅಹಮ್ಮದ್, ಅನುಷಾ, ನೆಹರೂ, ರತನ್, ಕೊಟ್ರೇಶ್, ಅರವಿಂದ್ ಮತ್ತಿತರರು ಇದ್ದರು.