23ರಿಂದ ಮೂರು ದಿನ ಆನೆ ಗಣತಿ

ELEPHANT FAMILY IN N HOLE
Published on

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 2024ನೇ ಸಾಲಿನ ಆನೆಗಳ ಗಣತಿ ಕಾರ್ಯವು ಮೇ 23ರಿಂದ 25ರವರೆಗೆ ಮೂರು ದಿನ ನಡೆಯಲಿದೆ.


ಗಣತಿ ಕಾರ್ಯಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ಸೇರಿದಂತೆ ಮೂರು ದಿನಗಳ ಕಾಲ ಮೂರು ವಿಧದ ಗಣತಿ ಕಾರ್ಯಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಗಣತಿ ಕಾರ್ಯದಲ್ಲಿ ಖಾಸಗಿ ಸ್ವಯಂ ಸೇವಕರಿಗೆ ಅವಕಾಶ ಇರುವುದಿಲ್ಲ. ವಾರ್ಷಿಕವಾಗಿ ನಡೆಯುವ ಗಣತಿ ಇದಾಗಿದ್ದು, ಇಲಾಖೆಯ ಸಿಬ್ಬಂದಿಯಿಂದ ಮಾತ್ರ ಗಣತಿ ಕಾರ್ಯ ನಡೆಯುತ್ತದೆ. ಪ್ರತಿ 5 ವರ್ಷಕೊಮ್ಮೆ ಆಯೋಜನೆಗೊಳ್ಳುವ ಸಮಗ್ರ ಗಣತಿ ಕಾರ್ಯದ ವೇಳೆ ಆಸಕ್ತ ಖಾಸಗಿ ಸ್ವಯಂ ಸೇವಕರನ್ನು ಸೇರ್ಪಡೆ ಮಾಡಿಕೊಳ್ಳುವುದು ವಾಡಿಕೆ.


ಅರಣ್ಯದೊಳಗಿನ ಕೃಷಿಕನೆಂದೇ ಬಿಂಬಿತನಾಗಿರುವ ಗಜರಾಜನ ಗಣತಿ ಕಾರ್ಯವು ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಏಕಕಾಲಕ್ಕೆ ಆಯೋಜನೆಗೊಂಡಿದೆ. ಪ್ರತಿ 5 ವರ್ಷಕ್ಕೊಮ್ಮೆ ಆನೆಗಳ ಸಮಗ್ರ ಗಣತಿ ಕಾರ್ಯ ನಡೆಯುತ್ತದೆ. ಅದರೊಂದಿಗೆ ಪ್ರತಿ ವರ್ಷವೂ ಅರಣ್ಯ ಇಲಾಖೆ ಸಿಬ್ಬಂದಿಯೇ ಆನೆ ಗಣತಿ ಕಾರ್ಯ ನಡೆಸಿ ರಾಜ್ಯ ಮಟ್ಟದ ಅಧಿಕಾರಿಗಳಿಗೆ ವರದಿಯನ್ನು ತಲುಪಿಸುವುದು ಪದ್ಧತಿ. 2023ರಲ್ಲಿ ಸಮಗ್ರ ಗಣತಿ ನಡೆದಿತ್ತು.
ರಾಜ್ಯದಲ್ಲಿ 2010ರಲ್ಲಿ 5,740 ಅನೆಗಳು ಇದ್ದವು. 2012ರಲ್ಲಿ ಇವುಗಳ ಸಂಖ್ಯೆ 6,072ಕ್ಕೇರಿತು. ಆದರೆ 2017ರಲ್ಲಿ ಸಂಖ್ಯೆ 6,049ಕ್ಕಿ ಇಳಿದಿತ್ತು. ಮತ್ತೆ 2023ರಲ್ಲಿ ಆನೆಗಳ ಸಂಖ್ಯೆ 6,395ಕ್ಕೇರುವ ಮೂಲಕ ರಾಜ್ಯದಲ್ಲಿ 346 ಆನೆಗಳು ಹೆಚ್ಚಾಗಿ ಕಂಡು ಬಂದವು. ಇದೀಗ ವಾರ್ಷಿಕ ಗಣತಿ ಕಾರ್ಯಕ್ಕೆ ಇಲಾಖೆ ಸಿದ್ಧತೆಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net