

ಕನಕಪುರ: ಕಸಬಾ ಹೋಬಳಿಯ ವಡ್ಲೇಗೌಡನದೊಡ್ಡಿ, ಹೊರಳಗಲ್ಲು, ಮದುವೇತಕ್ಕಲದೊಡ್ಡಿ ಮತ್ತು ಮರಳೆ ಗ್ರಾಮಗಳ ಬಳಿ ಕಾಡಾನೆಗಳ ಹಿಂಡು ಶನಿವಾರ ಜಮೀನುಗಳಿಗೆ ನುಗ್ಗಿ ಫಸಲು ನಾಶಮಾಡಿದೆ. ವಡ್ಲೇಗೌಡನದೊಡ್ಡಿ ಕೃಷ್ಣಪ್ಪ, ಹೊರಳಗಲ್ಲು ರೈತ ರಾಜು ಎಂಬುವವರ ಭತ್ತದ ಗದ್ದೆ, ಡ್ರೈವರ್ ರಮೇಶ್ ಎಂಬುವರ ರಾಗಿಹೊಲ ತುಳಿದು ನಾಶಪಡಿಸಿವೆ. ಚಂದ್ರ ಎಂಬುವವರ ಬೋರ್ವೆಲ್ ಪೈಪ್ಗಳನ್ನು, ಬಿ.ಸಿ.ಬೊಮ್ಮಯ್ಯ, ಸುಮಿತ್ರಾ ಅವರ ತೇಗ ಮತ್ತು ತೆಂಗಿನ ಮರ ಹಾಳು ಮಾಡಿವೆ. ಕಾಡಾನೆಗಳ ದಾಳಿಯಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಜಮೀನುಗಳ ಬಳಿ ಬಾರದಂತೆ ಕಂದಕಗಳನ್ನು ತೋಡಬೇಕು. ಫಸಲು ನಾಶಕ್ಕೆ ಸರ್ಕಾರ ಕೂಡಲೇ ಬೆಳೆನಷ್ಟ ತುಂಬಿಕೊಡುವಂತೆ ಒತ್ತಾಯಿಸಿದರು.
ಡಿಆರ್ಎಫ್ಒ ಮುತ್ತುನಾಯ್ಕ ಮಾತನಾಡಿ, ಈಗಾಗಲೇ ಹತ್ತಾರು ಕಡೆ ಆನೆಗಳ ದಾಳಿಯಿಂದ ಬೆಳೆನಾಶವಾಗಿರುವುದು ಕಂಡುಬಂದಿದೆ. ಅಂತಹ ರೈತರು ಸೂಕ್ತ ದಾಖಲಾತಿಗಳನ್ನು ಕಚೇರಿಗೆ ತಲುಪಿಸಲು ಸೂಚನೆ ನೀಡಲಾಗಿದೆ. ದಾಖಲಾತಿ ನೀಡಿದ ಬಳಿಕ ಪರಿಶೀಲಿಸಿ ಆನ್ಲೈನ್ ಮೂಲಕ ಪರಿಹಾರದ ಹಣವನ್ನು ಅವರ ಖಾತೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು. ಡಿಆರ್ಎಫ್ ಕೃಷ್ಣ, ಸಿಬ್ಬಂದಿ ನಾಗರಾಜ್ ಇತರರಿದ್ದರು.