ಕಾಡಾನೆಗಳ ದಾಳಿಗೆ ಅಡಕೆ, ಕಾಫಿ, ಮೆಣಸು ನಾಶ

ಮಾಲಹಳ್ಳಿಯ ಚಂದ್ರು ಅವರ ತೋಟದಲ್ಲಿ ಬೆಳೆ ಹಾಳಾಗಿರುವುದನ್ನು ತಹಸೀಲ್ದಾರ್ ಎಂ.ಮಮತಾ ವೀಕ್ಷಿಸಿದರು.
ಮಾಲಹಳ್ಳಿಯ ಚಂದ್ರು ಅವರ ತೋಟದಲ್ಲಿ ಬೆಳೆ ಹಾಳಾಗಿರುವುದನ್ನು ತಹಸೀಲ್ದಾರ್ ಎಂ.ಮಮತಾ ವೀಕ್ಷಿಸಿದರು.
Published on

ಬೇಲೂರು: ತಾಲೂಕಿನ ಅರೇಹಳ್ಳಿ ಸಮೀಪದ ಮಾಲಹಳ್ಳಿ ಕಾಫಿ ತೋಟ ಹಾಳು ಮಾಡಿ ಹೋಗಿದ್ದ ಕಾಡಾನೆಗಳ ಹಿಂಡು ಪುನಃ ಗುರುವಾರ ರಾತ್ರಿ 2ನೇ ಬಾರಿಗೆ ದಾಳಿ ಮಾಡಿ ಅಡಕೆ, ಕಾಫಿ, ಮೆಣಸು, ಬಾಳೆ ಬೆಳೆಯನ್ನು ನಾಶಪಡಿಸುವುದರ ಜತೆಗೆ ತೋಟದ ಮುಂಭಾಗ ಅಳವಡಿಸಿದ್ದ ಗೇಟ್‌ಅನ್ನು ಕಿತ್ತೆಸೆದಿವೆ.

ಮಾಲಹಳ್ಳಿಯ ಎಚ್.ಎನ್.ಚಂದ್ರು ಅವರ ತೋಟದ ಕೆರೆಯಲ್ಲಿ ಈಜಾಡಿದ್ದ ಕಾಡಾನೆಗಳು ನಂತರ ತೋಟದಲ್ಲಿದ್ದ ಬೆಳೆಗಳನ್ನು ನಾಶಮಾಡಿ ಹೊಗಿದ್ದವು. ಇದೀಗ ಮತ್ತೆ ತೋಟಕ್ಕೆ ವಾಪಸ್ ಬಂದು ಬೆಳೆಗಳನ್ನು ತಿಂದು ಹಾಳು ಮಾಡಿವೆ. ಜತೆಗೆ ತೋಟದಲ್ಲಿದ್ದ ನೀರಿನ ಪೈಪ್‌ಗಳನ್ನು ತುಳಿದು ಹಾಕಿವೆ. ಇದು ಸಾಲದು ಎಂಬಂತೆ ಗೇಟ್‌ನ ಕಾಂಕ್ರೀಟ್ ಪಿಲ್ಲರ್ ಸಮೇತ ಕಿತ್ತು ಎಸೆದಿದೆ.

ಆನೆಗಳು ತೋಟದಲ್ಲಿ ಮರಗಳನ್ನು ಮುರಿಯುವ ಶಬ್ದ ಕೇಳಿ ಎದುರು ತೋಟದ ವೀರೇಶ್ ಅವರು ತಮಟೆ ಮತ್ತು ಪಟಾಕಿ ಸಿಡಿಸಿದ್ದಾರೆ. ಇಷ್ಟಾದರೂ ಆನೆಗಳು ಜಗ್ಗದೆ ನಿರಂತರವಾಗಿ ದಾಳಿ ನಡೆಸಿ ಬೆಳೆ ನಾಶ ಪಡಿಸಿವೆ. ಇಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ದೂರಕ್ಕೆ ಓಡಿಸಬೇಕೆಂದು ಮಾಲೀಕ ಅಲವತ್ತುಕೊಂಡಿದ್ದಾರೆ.

ವಿಷಯ ತಿಳಿದ ತಹಸೀಲ್ದಾರ್ ಎಂ.ಮಮತಾ ಶುಕ್ರವಾರ ತೋಟಕ್ಕೆ ಭೇಟಿ ನೀಡಿ ಪರೀಶೀಲಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷ ಮುಂದುವರಿಯುತ್ತಿರುವುದು ಬೇಸರದ ಸಂಗತಿ. ಆನೆಗಳ ಆಹಾರಕ್ಕೆ ಪರದಾಟ ಒಂದೆಡೆಯಾದರೆ, ರೈತರು ಬೆಳೆದ ಬೆಳೆಗಳು ಕಣ್ಮುಂದೆ ನಾಶವಾಗುತ್ತಿರುವುದು ಮತ್ತೊಂಡೆದೆ. ಇಲಾಖೆ ಕೊಡುವ ಪರಿಹಾರ ರೈತರಿಗೆ ಸಾಕಾಗುತ್ತಿಲ್ಲ. ಸಣ್ಣ ಗಿಡಗಳನ್ನು ಪೋಷಣೆ ಮಾಡಿ ಮರವಾಗಿ ಬೆಳೆಸಿ ಪಸಲು ಬಿಡುವ ಸಮಯದಲ್ಲಿ ಕಾಡಾನೆಗಳು ಉರುಳಿಸಿದರೆ ರೈತರಿಗೆ ಕಣ್ಣೀರೆ ಹೊರತು ಬೇರೇನೂ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಹಿಂದೆಲ್ಲ ಆನೆಗಳನ್ನು ಮೃಗಾಲಯದಲ್ಲಿ ನೋಡಬೇಕಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜಾರೋಷವಾಗಿ ಮನೆಮುಂದೆ ಓಡಾಡುತ್ತಿವೆ. ಈ ಬಗ್ಗೆ ರೈತರು ಕೂಡ ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಅಲ್ಲದೆ ಮಾ.3ರಂದು ಮೂರು ಜಿಲ್ಲೆಗಳ ಶಾಸಕರು, ಇಟಿಎಫ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿದ್ದು, ಕಾಡಾನೆಗಳ ಉಪಟಳಕ್ಕೆ ಪರಿಹಾರ ದೊರಕುವ ನಿರೀಕ್ಷೆ ಇದೆ ಎಂದರು.

ಗ್ರಾಪಂ ಸದಸ್ಯ ವೀರೇಶ್‌ಗೌಡ, ಬೆಳೆಗಾರ ರಹಿಸೂರ್ ರೆಹಮಾನ್, ಕಂದಾಯಾಧಿಕಾರಿ ಚಂದ್ರೇಗೌಡ, ಸಿಬ್ಬಂದಿ ಲೋಕೇಶ್, ಸುಬ್ರಹ್ಮಣ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net