

ಗುಂಡ್ಲುಪೇಟೆ : ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಆನೆಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಇದನ್ನು ನಿಯಂತ್ರಿಸಲು ಕ್ರಮಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಅರಣ್ಯದಿಂದ ಪ್ರತಿ ದಿನವೂ ಆನೆಗಳು ಹೊರಬಂದು ಕಾಡಂಚಿನ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ನಾಶಪಡಿಸುತ್ತಿವೆ, ಶನಿವಾರ ಸಂಜೆ ಗ್ರಾಮದ ಲೋಕೇಶ್ ಎಂಬುವರ ಜಮೀನಿಗೆ ದಾಳಿ ನಡೆಸಿದ ಆನೆಗಳ ಹಿಂಡು ಅಲ್ಲಿ ಬೆಳೆದಿದ್ದ ತೆಂಗಿನ ಸಸಿಗಳನ್ನು ಕಿತ್ತುಹಾಕಿ ಬೀಟ್ ರೂಟ್ ಮುಂತಾದ ಫಸಲನ್ನು ತುಳಿದು ನಾಶಪಡಿಸಿವೆ.
ಈ ಬಗ್ಗೆ ಮಾಹಿತಿ ನೀಡಿದರೂ ತಡವಾಗಿ ಆಗಮಿಸಿದ ಅರಣ್ಯ ಸಿಬ್ಬಂದಿ ಬೇಜವಾಬ್ದಾರಿಯಿಂದ ಉತ್ತರಿಸುತ್ತಿದ್ದಾರೆ. ಆನೆಗಳು ಕಾಡಿನಿಂದ ಹೊರಬರುವ ಸ್ಥಳಗಳಲ್ಲಿ ಕಾವಲು ಕಾಯದೆ ನಿರ್ಲಕ್ಷಿಸುತ್ತಿರುವ ಕಾರಣ ಪ್ರತಿ ದಿನವೂ ಆನೆಗಳು ದಾಳಿ ಮಾಡಿ ಸಾಲಸೋಲ ಮಾಡಿ ಬೆಳೆದ
ಬೆಳೆಗಳನ್ನು ನಾಶ ಮಾಡುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ರೈತರು ಬೇರೆ ದಾರಿಯೇ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಆನೆಗಳನ್ನು ಕಾಡಿಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.