

ವಿಜಯವಾಣಿ ಸುದ್ದಿಜಾಲ ಕಡಬ
6 ದಿನಗಳಿಂದ ಕೊಂಬಾರು ಗ್ರಾಪಂ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಅನಿಲ, ಅಮ್ಚೂರು, ಬಗ್ಪುಣಿ, ದೇರಣೆ, ಕೋಲ್ಪೆ ಮುಂತಾದ ಪ್ರದೇಶಗಳಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುವ ಆನೆ ಆಹಾರಕ್ಕಾಗಿ ಕೃಷಿ ತೋಟಗಳಿಗೆ ಬರುತ್ತಿದೆ. ಪರಿಣಾಮ ಅಪಾರ ಕೃಷಿ ನಾಶವಾಗಿದೆ ಹಾಗೂ ಸ್ಥಳೀಯರು ಆತಂಕದಿಂದಲೇ ದಿನದೂಡುವಂತಾಗಿದೆ.
ಗ್ರಾಮ ಪರಿಸರದ ನಾಗೇಶ್ ಗೌಡ ಅನಿಲ, ವೆಂಕಟ್ರಮಣ ಅನಿಲ, ನೀಲಪ್ಪ ಗೌಡ ಬಗ್ಪುಣಿ, ರುಕ್ಮಯ್ಯ ಗೌಡ ದೇರಣೆ ಮುಂತಾದವರ ತೋಟಗಳಲ್ಲಿ ನೂರಾರು ಬಾಳೆ ಹಾಗೂ ಅಡಕೆ ಗಿಡಗಳು ಸಂಪೂರ್ಣ ನಾಶವಾಗಿದ್ದು, ನೀರಾವರಿ ಪೈಪ್‌ಲೈನ್, ತೋಟದಲ್ಲಿ ಅಳವಡಿಸಲಾಗಿದ್ದ ಸ್ಪ್ರಿಂಕ್ಲರ್ ಸಲಕರಣೆಗಳು ಆನೆಗಳ ತುಳಿತಕ್ಕೀಡಾಗಿ ಅಪಾರ ನಷ್ಟ ಸಂಭವಿಸಿದೆ. ಹತ್ತಿರದ ಕೊಂಬಾರು ರಕ್ಷಿತಾರಣ್ಯದಿಂದ ಕಾಡಾನೆಗಳು ಪದೇಪದೆ ಬಂದು ಕೃಷಿಗೆ ಹಾನಿ ಮಾಡುತ್ತಿವೆ. ಪ್ರತಿ ವರ್ಷ ಇದೇ ರೀತಿ ಆನೆ ದಾಳಿಯಿಂದಾಗಿ ಕೃಷಿ ನಾಶವಾಗಿ ಅಪಾರ ನಷ್ಟ ಸಂಭವಿಸುತ್ತಿದ್ದು ಗ್ರಾಮಸ್ಥರು ಕಂಗೆಟ್ಟಿದ್ದಾರೆ.
ಹಗಲು ಹೊತ್ತಲ್ಲೂ ಆತಂಕ: ಗ್ರಾಮವು ಬಹುತೇಕ ಅರಣ್ಯದಿಂದಲೇ ಆವೃತವಾಗಿದ್ದು, ಜನರು ಹಗಲು ಹೊತ್ತಿನಲ್ಲಿಯೂ ಆತಂಕದಿಂದಲೇ ಓಡಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಲವಾರು ಬಾರಿ ಜನಸಂಚಾರವಿರುವ ರಸ್ತೆಗಳಲ್ಲಿಯೇ ಜನರಿಗೆ ಆನೆ ಎದುರಾಗಿರುವುದರಿಂದಾಗಿ ಅಗತ್ಯ ಕೆಲಸ ಕಾರ್ಯಗಳಿಗೆ ಪೇಟೆಗೆ ಹೋಗುವ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಕಾಡು ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ.
ಪ್ರಯೋಜನವಿಲ್ಲದ ದೂರು: ಆನೆ ಹಾಗೂ ಇತರ ಕಾಡು ಪ್ರಾಣಿಗಳ ಉಪಟಳದಿಂದ ಕಂಗೆಟ್ಟ ಪರಿಸರದ ನಿವಾಸಿಗಳು ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲ ವರ್ಷಗಳ ಹಿಂದೆ ಅರಣ್ಯದಿಂದ ಆನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ಆನೆ ಕಂದಕಗಳನ್ನು ನಿರ್ಮಿಸಲಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ. ನಿರ್ಮಿಸಲಾಗಿರುವ ಆನೆ ಕಂದಕಗಳೂ ಅವೈಜ್ಞಾನಿಕವಾಗಿದ್ದು, ಸರ್ಕಾರದ ಅನುದಾನ ಪೋಲು ಮಾಡುವುದಕ್ಕಷ್ಟೇ ಸೀಮಿತವಾಗಿದೆ. ಅನೇಕ ಕಡೆ ಹಳೆಯ ಅಗಳುಗಳನ್ನೇ ಪುನಃ ನಿರ್ಮಿಸಿ ಮಣ್ಣು ತೆಗೆದು ಆನೆ ಕಂದಕ ಮಾಡಿದ್ದೇವೆ ಎಂದು ಹಣ ಮಾಡುವ ದಂಧೆಯಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಅರಣ್ಯಾಧಿಕಾರಿಗಳು ಆನೆ ಹಾವಳಿಯನ್ನೇ ಮುಂದಿಟ್ಟುಕೊಂಡು ಈ ರೀತಿಯ ಕಳಪೆ ಕೆಲಸಗಳನ್ನು ಮಾಡಿ ದುಡ್ಡು ಕಬಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೊಂಬಾರಿನಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮುಂದೆಯೂ ಕಾಡುಪ್ರಾಣಿಗಳಿಂದ ನಮಗೆ ಆಗುತ್ತಿರುವ ತೊಂದರೆ ಬಗ್ಗೆ ದೂರು ನೀಡಿದ್ದೆವು. ಜನಪ್ರತಿನಿಧಿಗಳು ಹಾಗೂ ಅರಣ್ಯಾಧಿಕಾರಿಗಳು ನಮ್ಮ ಕೂಗಿಗೆ ಸೂಕ್ತ ಸ್ಪಂದನೆ ನೀಡುವ ಮೂಲಕ ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ನಮಗೆ ರಕ್ಷಣೆ ನೀಡಬೇಕಿದೆ.
-ಗಣೇಶ್ ಅನಿಲ, ಸ್ಥಳೀಯರು