ಪರಿವಾರಕಾನ ಭಾಗದಲ್ಲಿ ತೀವ್ರಗೊಂಡ ಆನೆ ಹಾವಳಿ

New Project (29)
Published on

ವಿಜಯವಾಣಿ ಸುದ್ದಿಜಾಲ ಸುಳ್ಯ

ಸುಳ್ಯ ನಗರ ಸಮೀಪ ಅರಂಬೂರು, ಪರಿವಾರಕಾನ ಸೇರಿ ವಿವಿಧ ಭಾಗಗಳಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಆನೆ ಹಾವಳಿ ತಡೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅಲೆಟ್ಟಿ ಗ್ರಾಮದ ಕಲ್ಲರ್ಪೆ ಪಾಲಡ್ಕ, ಅರಂಬೂರು ಪರಿವಾರಕಾನ ಮತ್ತಿತರ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುವ ಆನೆಗಳು ಕೃಷಿ ಹಾನಿ ಮಾಡುತ್ತಿವೆ. ಅರಂಬೂರು, ಪರಿವಾರಕಾನ, ಪಾಲಡ್ಕ, ಕಲ್ಚರ್ಪೆ ಭಾಗದಲ್ಲಿ ಹಲವು ಸಮಯಗಳಿಂದ ಆನೆಗಳ ಹಿಂಡು ಕೃಷಿ ಹಾನಿ ಮಾಡುತ್ತಿವೆ. ರಾತ್ರಿ ಪೂರ್ತಿ ನಿದ್ರೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಭಾಗದಲ್ಲಿ 220ಕ್ಕಿಂತಲೂ ಅಧಿಕ ಮನೆ, 400 ಎಕರೆ ಪ್ರದೇಶಗಳಲ್ಲಿ ಬಾಳೆ, ತೆಂಗು, ಭತ್ತ, ಅಡಕೆ ಕೃಷಿ ಮಾಡುತ್ತಿದ್ದು, ಇದು ಆನೆ ಹಾವಳಿಯಿಂದ ನಾಶವಾಗುತ್ತಿದೆ.

ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ವಾಹನ ಸಂಚಾರಕ್ಕೆ ಭಯ ಪಡುವ ಸ್ಥಿತಿ ಉಂಟಾಗಿದೆ. ಆದ್ದರಿಂದ ರಸ್ತೆ ಬದಿಯಲ್ಲಿ ವಿದ್ಯುದ್ದೀಪ ಅಳವಡಿಸಬೇಕು. ಆನೆ ತಡೆಗೋಡೆಯನ್ನು ಪರಿವಾರಕಾನದಿಂದ- ಅರಣ್ಯ ಇಲಾಖೆಯ ಮರದ ಡಿಪೋ ತನಕ, ಪಾಲಡ್ಕದಿಂದ ಕಲ್ಬರ್ಪೆ ತನಕ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಮುಖರಾದ ಜಗದೀಶ್ ಸರಳಿಕುಂಜ, ಶ್ರೀಪತಿ ಭಟ್, ಅನಿಲ್ ಪರಿವಾರಕಾನ, ಅಶೋಕ್ ಪೀಚೆ, ಸುದೇಶ್ ಅರಂಬೂರು, ರವಿ, ಪುಷ್ಪಾವತಿ ಕುಡೆಕಲ್ಲು, ಗುರುಪ್ರಸಾದ್ ಕುಡೆಕಲ್ಲು, ಶಬರೀಶ ಪರಿವಾರಕಾನ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net