

ಹನೂರು : ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಶನಿವಾರ ರಾತ್ರಿ ಜಮೀನುಗಳಿಗೆ ಲಗ್ಗೆ ಇಟ್ಟು ಸೋಲಾರ್ ಬೇಲಿಯನ್ನೇ ನಾಶಪಡಿಸಿವೆ. ಈ ಬಗ್ಗೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ತಿರುಮಮ್ಮ, ಚಂದ್ರಮ್ಮ, ನಾಗೇಂದ್ರ, ಮುನಿಯಪ್ಪ ಸೇರಿದಂತೆ ಹಲವು ರೈತರ ಜಮೀನುಗಳಿಗೆ ರಾತ್ರಿ ವೇಳೆ ಲಗ್ಗೆ ಇಟ್ಟ ಗಜ ಪಡೆ ಮುಸುಕಿನ ಜೋಳದ ಫಸಲನ್ನು ತಿಂದು, ತುಳಿದು ನಾಶಪಡಿಸಿವೆ. ಸೋಲಾರ್ ಬೇಲಿಯನ್ನೂ ಹಾನಿಗೊಳಿಸಿದ್ದು, ಇದರಿಂದ ನಷ್ಟ ಉಂಟಾಗಿದೆ. ಈ ಬಗ್ಗೆ ರೈತರು ತೀವ್ರ ಆಕ್ರೋಶ ಪಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮಕ್ಕೆ ನೀಡಿದ್ದರು. ಕಾಡಾನೆಗಳು ಜಮೀನಿಗೆ ಲಗ್ಗೆ ಇಡದಂತೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಇದರಿಂದ ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಗತ್ಯ ಸಿಬ್ಬಂದಿ ನಿಯೋಜಿಸದ ಪರಿಣಾಮ ರಾತ್ರಿ ವೇಳೆ ಕಾಡಾನೆಗಳು ಜಮೀನಿಗೆ ಲಗ್ಗೆ ಇಡುತ್ತಿವೆ. ಸಂಜಯ್ ಹಾಗೂ ಮುನಿಯಪ್ಪ ಅವರ ಜಮೀನಿನ ಬೆಳೆ, ಸೋಲಾರ್ ಬೇಲಿ ನಾಶವಾಗಿದೆ. ಇದರಿಂದ ರಾತ್ರಿ ತೋಟ, ಗದ್ದೆ ಕಾವಲು ಕಾಯಲು ಜೀವಭಯ ಎದುರಾಗಿದೆ ಎಂದು ನೊಂದ ಕೃಷಿಕರು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಕಾಡಾನೆಗಳನ್ನು ಕಾಡಿಗೆ ಕಳುಹಿಸುವುದರ ಜತೆಗೆ ಮತ್ತೆ ಜಮೀನುಗಳಿಗೆ ಲಗ್ಗೆ ಇಡದಂತೆ ಕಡಿವಾಣ ಹಾಕುವಂತೆ ರೈತ ಶಿವರಾಜು ಒತ್ತಾಯಿಸಿದ್ದಾರೆ.