ತರಕಾರಿ ಫಸಲು ನಾಶಪಡಿಸಿದ ಕಾಡಾನೆ ಹಿಂಡು

11 HANUR 7
Published on

 ಹನೂರು: ತಾಲೂಕಿನ ಬೈಲೂರು ಸಮೀಪದ ಜಮೀನೊಂದಕ್ಕೆ ಕಾಡಾನೆ ಹಿಂಡು ಲಗ್ಗೆ ಇಟ್ಟು ತರಕಾರಿ ಫಸಲನ್ನು ತಿಂದು ನಾಶಪಡಿಸಿವೆ. ಗ್ರಾಮದ ಕೃಷಿಕ ಭಕ್ತ ವತ್ಸಲ ಎಂಬುವರು ಜಮೀನಿನ 3 ಎಕರೆಯಲ್ಲಿ ಬೀನ್ಸ್, ಕ್ಯಾರೆಟ್, ಕೋಸು, ಬೀಟ್ ರೋಟ್ ಹಾಗೂ ಇನ್ನಿತರೆ ತರಕಾರಿ ಫಸಲನ್ನು ಬೆಳೆದಿದ್ದರು. ಸೋಮವಾರ ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆಗಳ ಹಿಂಡು ಫಸಲನ್ನು ತಿಂದು, ತುಳಿದು ನಾಶಪಡಿಸಿ ನಷ್ಟ ಉಂಟು ಮಾಡಿವೆ. ಸುದ್ದಿ ತಿಳಿದು ಮಂಗಳವಾರ ಆರ್‌ಎಫ್‌ಒ ಪ್ರಮೋದ್ ಹಾಗೂ ಸಿಬ್ಬಂದಿ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ರೈತ ಭಕ್ತವತ್ಸಲ ಪ್ರತಿಕ್ರಿಯಿಸಿ, ಕಳೆದ ಹಲವು ತಿಂಗಳಿನಿಂದ ಕಾಡಾನೆಗಳು ಸೋಲಾರ್ ಬೇಲಿಯನ್ನು ನಾಶಪಡಿಸಿ ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇದರಿಂದ ಲಕ್ಷಾಂತರ ರೂ. ಫಸಲು ನಷ್ಟವಾಗಿದೆ. ಆದರೆ ಕಾಡಾನೆಗಳ ಕಡಿವಾಣಕ್ಕೆ ಇಲಾಖೆ ಯಾವುದೇ ಕ್ರಮವಹಿಸಿಲ್ಲ. ಇದರಿಂದ ತುಂಬಾ ಸಮಸ್ಯೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಡಾನೆಗಳ ಹಾವಳಿಯಿಂದ ಫಸಲು ನಷ್ಟಕ್ಕೆ ಒಳಗಾಗುವುದರಿಂದ ಜಮೀನಿಗೆ ನೀರುಣಿಸುವುದನ್ನೇ ಸ್ಥಗಿತ ಗೊಳಿಸಿದ್ದೇನೆ. ನಷ್ಟವಾಗಿರುವ ಫಸಲಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು. ಅಗತ್ಯ ಕ್ರಮ ವಹಿಸುವುದಾಗಿ ಆರ್‌ಎಫ್‌ಒ ಪ್ರಮೋದ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net