ವನ್ಯಜೀವಿ ದಾಳಿ ತಡೆಗೆ ವೈಜ್ಞಾನಿಕ ಮಾರ್ಗ

elephant
Published on

ಮಡಿಕೇರಿ:

ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಈತನಕ ಮಾಡಿರುವ ಪ್ರಯತ್ನಗಳೆಲ್ಲಾ ನೀರಿನ ಮೇಲೆ ಹೋಮ ಮಾಡಿದಂತೆ ಆಗಿದೆಯೇ ಹೊರತೂ ಪರಿಣಾಮಕಾರಿ ಫಲ ಸಿಕ್ಕಿಲ್ಲ ಎನ್ನುವುದು ಸ್ಥಳೀಯರ ಆರೋಪ. ಇದೀಗ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಈ ನಿಟ್ಟಿನಲ್ಲಿ ಪ್ರಬಲ ಇಚ್ಚಾಶಕ್ತಿ ಪ್ರದರ್ಶಿಸಿದ್ದು, ಸ್ಥಳೀಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ವನ್ಯಜೀವಿ-ಮಾನವ ಸಂಘರ್ಷಕ್ಕೆ ಸಂಬAಧಿಸಿದAತೆ ಕೊಡಗಿನಲ್ಲಿ ದಿನಕ್ಕೆ ಕನಿಷ್ಠ ಒಂದಾದರೂ ಪ್ರಕರಣ ವರದಿ ಆಗದಿದ್ದರೆ ಆ ದಿನ ಪರಿಪೂರ್ಣ ಆಗುವುದಿಲ್ಲ ಎನ್ನುವ ಸ್ಥಿತಿ ನಿರ್ಮಾಣ ಆಗಿದೆ. ಮನುಷ್ಯರು, ವಾಹನಗಳು, ಸಾಕುಪ್ರಾಣಿಗಳ ಮೇಲೆ ಕಾಡಾನೆ ದಾಳಿ, ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುವ ಕಾಡಾನೆಗಳು, ಕೊಟ್ಟಿಗೆಗೆ ನುಗ್ಗಿ ಹಸುವಿನ ಮೇಲೆ ಎರಗುವ ಹುಲಿ, ತೋಟದ ಕೆಲಸ ಮಾಡುತ್ತಿರುವವರ ಮೇಲೆ ಹುಲಿ ದಾಳಿ, ನಾಯಿ ಹೊತ್ತೊಯ್ಯುವ ಚಿರತೆಗಳ ಉಪಟಳ, ಕಾಡು ಕೋಣ, ಕಾಡೆಮ್ಮೆ, ಮಂಗ, ನವಿಲುಗಳ ಹಾವಳಿ... ಹೀಗೆ ಹಲವು ವಿಧದದಲ್ಲಿ ವನ್ಯ ಪ್ರಾಣಿಗಳಿಂದ ಪ್ರತಿನಿತ್ಯ ಸಮಸ್ಯೆ ಆಗುತ್ತಲೇ ಇರುತ್ತದೆ.

ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪ್ರಯತ್ನ ರೂಪಿಸಲಾಗುವುದು ಎನ್ನುವ ಭರವಸೆ ಪ್ರತಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳ ನಾಯಕರಿಂದ ಕೇಳಿ ಬರುತ್ತಲೇ ಇರುತ್ತದೆ. ಮತದಾರರು ಕೂಡ ಇದೇ ಬೇಡಿಕೆಯನ್ನು ಮುಂದಿಡುತ್ತಾರೆ. ಆದರೆ ಹೊಸ ಸರ್ಕಾರ, ನೂತನ ಜನಪ್ರತಿನಿಧಿಗಳು ಬಂದಾಗ ಒಂದಿಷ್ಟು ಪ್ರಯತ್ನಗಳು ನಡೆದರೂ ಸಮಸ್ಯೆ ಮಾತ್ರ ಹಾಗೆಯೇ ಉಳಿದುಕೊಂಡಿರುತ್ತದೆ. ಇದೀಗ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ತೋರಿಸಿ ಮುಂದಡಿ ಇಟ್ಟಿರುವುದು ಸ್ಥಳೀಯರಲ್ಲಿ ದೊಡ್ಡ ಮಟ್ಟದ ಭರವಸೆ ಮೂಡಿಸಿದೆ. ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ಪೊನ್ನಣ್ಣ ತಮ್ಮ ಪ್ರಭಾವ ಬಳಸಿ ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪ್ರಯತ್ನ ಕಂಡುಕೊಳ್ಳುವ ನಿಟ್ಟಿನಲ್ಲಿ ಆರಂಭದಿAದಲೇ ಪ್ರಯತ್ನ ನಡೆಸುತ್ತಿದ್ದಾರೆ.

ಪೊನ್ನಣ್ಣ ಶಾಸಕರಾಗಿ ಆಯ್ಕೆ ಆದ ಕೂಡಲೇ ವನ್ಯಜೀವಿ-ಮಾನವ ಸಂಘರ್ಷಕ್ಕೆ ಶಾಶ್ವತ ಪ್ರಯತ್ನ ಕಂಡು ಹುಡುಕುವ ಪ್ರಯತ್ನಕ್ಕೆ ಮೊದಲು ಕೈ ಹಾಕಿದರು. ಹಾಗಾಗಿಯೇ 2023ರ ಆಗಸ್ಟ್ 26ಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಕೊಡಗಿಗೆ ಕರೆ ತಂದಿದ್ದರು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೂ ಜತೆಯಲ್ಲಿ ಇದ್ದರು. ದಕ್ಷಿಣ ಕೊಡಗಿನ ಆನೆ ಹಾವಳಿ ಪ್ರದೇಶಗಳಿಗೆ ಖದ್ದು ಸಚಿವರನ್ನು ಕರೆದುಕೊಂಡು ಹೋಗಿ ಸಮಸ್ಯೆಗಳ ಸಾಕ್ಷಾತ್ ದರ್ಶನ ಮಾಡಿಸಿದರು. ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಸಚಿವರ ಜತೆ ಅಭಿಪ್ರಾಯ ಹಂಚಿಕೊಳ್ಳಲು ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟರು. ಈ ಭೇಟಿ ಅರಣ್ಯ ಸಚಿವರಿಗೆ ಕೊಡಗಿನ ಸಮಸ್ಯೆಯ ಗಂಭೀರತೆ ಅರಿವಾಗಲು ಸಹಾಯಕವಾಯಿತು.

ಕೊಡಗಿನಲ್ಲಿ ಸುಮಾರು 1 ಸಾವಿರ ಆನೆಗಳಿದ್ದು, ಈ ಪೈಕಿ 200ಕ್ಕಿಂತ ಅಧಿಕ ಆನೆಗಳು ಕಾಡಿನಿಂದ ಹೊರಗೆ ಬದುಕುತ್ತಿವೆ. ವಿರಾಜಪೇಟೆ ತಾಲೂಕು ಒಂದರಲ್ಲೆ 60ರಿಂದ 70 ಆನೆಗಳು ಕಾಡಿನಿಂದ ಹೊರಗಿವೆ. ಆನೆಗಳು ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಎಲ್ಲ ಕಡೆ ಇಲ್ಲಿ ಕಾಡಿರುವುದು ಹಾಗೂ ಕಾಫಿ ತೋಟಗಳೂ ಕಾಡಿನಂತಿರುವುದು ಇದಕ್ಕೆ ಕಾರಣ ಎಂದಿದ್ದ ಈಶ್ವರ ಖಂಡ್ರೆ ಈ ಆನೆಗಳನ್ನು ಮರಳಿ ಕಾಡಿಗೆ ಕಳುಹಿಸಬೇಕು ಎನ್ನುವ ಬೇಡಿಕೆ ಕುರಿತು ಚಿಂತಿಸಲಾಗುವುದು. ಇದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ವೈಜ್ಞಾನಿಕ ಕ್ರಮ ಎಂಬುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಇದನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು. ಸೋಲಾರ್ ಬೇಲಿ, ಆನೆ ಕಂದಕ ಸೇರಿದಂತೆ ಆನೆ ಮಾನವ ಸಂಘರ್ಷ ತಡೆಗೆ ಶಾಶ್ವತ ಕ್ರಮ ಕೈಗೊಳ್ಳಲಾಗುವುದು ಎನ್ನುವ ಭರವಸೆ ಕೊಟ್ಟು ತೆರಳಿದ್ದರು.

ಸಚಿವರು ಭರವಸೆ ನಂಬಿ ಶಾಸಕ ಪೊನ್ನಣ್ಣ ಸುಮ್ಮನೆ ಕೂರಲಿಲ್ಲ. ನಿರಂತರವಾಗಿ ಬೆನ್ನು ಬಿದ್ದು ಒಂದೊAದಾಗಿ ಯೋಜನೆಗಳನ್ನು ರೂಪಿಸುವಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ಉಪಟಳ ಕೊಡುವ ಆನೆಗಳಿಗೆ ಆನೆಧಾಮ ನಿರ್ಮಾಣ ಪ್ರಸ್ತಾಪ ಈ ಪ್ರಯತ್ನದ ಫಲಶೃತಿಗಳಲ್ಲಿ ಒಂದು. ಇದೀಗ ಕೊಡಗಿಗೆ 22 ಕೋಟಿ ರೂ. ಮೊತ್ತದ ವಿಶೇಷ ಅನುದಾನವೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಿಕ್ಕಿದೆ. ಈ ಮೊತ್ತವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ವಿವಿಧ ಪ್ರದೇಶದ 15 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆಯನ್ನೂ ನೀಡಲಾಗಿದೆ.

ಬಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಕುಟ್ಟಂದಿಯಲ್ಲಿ 3 ಕಿ.ಮೀ. ಉದ್ದ, ನಾಗರಹೊಳೆ ಆಭಯಾರಣ್ಯ ವ್ಯಾಪ್ತಿಯಲ್ಲಿ 11 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಶಾಸಕ ಎ.ಎಸ್. ಪೊನ್ನಣ್ಣ ಮಂಗಳವಾರ ಭೂಮಿ ಪೂಜೆ ನೆರವೇರಿಸಿದ್ದಾರೆ. ಮಡಿಕೇರಿ ವಿಭಾಗದ ದುಬಾರೆ ಮೀಸಲು ಅರಣ್ಯದ ಸರಹದ್ದಿನಲ್ಲೂ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಶಾಶ್ವತವಾಗಿ ವನ್ಯಪ್ರಾಣಿ ಹಾವಳಿ ನಿಯಂತ್ರಿಸಲು ಅಗತ್ಯವಿರುವ ಕಡೆ ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ನಿರ್ಮಾಣ ಹಾಗೂ ಆನೆ ಕಂದಕ ನಿರ್ಮಾಣವನ್ನೂ ಮಾಡಲಾಗುತ್ತಿದೆ.

ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ನಿರ್ಮಾಣದಿಂದ ಶೇ.80 ರಷ್ಟು ಪ್ರಮಾಣದಲ್ಲಿ ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಬಹುದಾಗಿದೆ. ಕಾಡಾನೆ ನಿಯಂತ್ರಣಾ ಕ್ರಮಗಳನ್ನು ತೆಗೆದುಕೊಳ್ಳುವ ಸಂದರ್ಭ ಪರಿಸರ ಸಂರಕ್ಷಣೆ ಜತೆಗೆ ವನ್ಯಪ್ರಾಣಿಗಳಿಗೂ ಯಾವುದೇ ರೀತಿಯ ತೊಂದರೆಯಾಗದAತೆ ಗಮನಹರಿಸಲಾಗಿದೆ. ಈ ಯೋಜನೆಯಲ್ಲಿ ಸಾರ್ವಜನಿಕರ ಸಹಯೋಗವನ್ನೂ ಬಳಸಿಕೊಳ್ಳಲಾಗುತ್ತಿದೆ.

ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಕಾಡಂಚಿನ ಪ್ರದೇಶದಲ್ಲಿ ಸುಮಾರು 182 ಗ್ರಾಮಗಳು ಇವೆ. ಈ ಭಾಗದಲ್ಲಿ ವನ್ಯಪ್ರಾಣಿಗಳ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ. ಅರಣ್ಯ ಇಲಾಖೆಯಿಂದ 17 ತಂಡಗಳನ್ನು ರಚಿಸಲಾಗಿದ್ದು, ಸ್ಥಳೀಯರಿಗೆ ಎಸ್‌ಎಂಎಸ್ ಮೂಲಕ ವನ್ಯಪ್ರಾಣಿಗಳ ಚಲನವಲನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 16,800 ಜನರಿಗೆ ಈ ರೀತಿ ಎಸ್‌ಎಂಎಸ್ ಹೋಗುತ್ತಿದೆ. ಈ ವರ್ಷ 5 ಕೋಟಿ ರೂ. ಬೆಳೆಪರಿಹಾರ ವಿತರಿಸಲಾಗಿದೆ. ಇನ್ನೂ 1 ಕೋಟಿ ರೂ. ಬೆಳೆ ಪರಿಹಾರ ವಿತರಿಸಲು ಬಾಕಿ ಇದೆ.

ಕೊಡಗಿನಲ್ಲಿ ವನ್ಯಪ್ರಾಣಿ ಹಾವಳಿ ತಡೆಯಲು ಸರ್ಕಾರ ಹಲವು ಯೋಜನೆಗಳು ಮತ್ತು ಕಾರ್ಯಕ್ರಮ ರೂಪಿಸಿದೆ. ಆ ನಿಟ್ಟಿನಲ್ಲಿ ನಾಗರಿಕರು, ಅಧಿಕಾರಿಗಳು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ವನ್ಯಪ್ರಾಣಿ ಹಾವಳಿ ನಿಯಂತ್ರಿಸುವಲ್ಲಿ ಅಗತ್ಯ ಕ್ರಮಕೈಗೊಂಡು ಮಾನವ ಪ್ರಾಣ ಉಳಿಸುವುದು, ಬೆಳೆ ಹಾನಿ ತಡೆಯುವುದು ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಗಮನಕ್ಕೆ ತಂದಾಗ 22 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಮಂಜೂರಾತಿ ಕೊಟ್ಟಿದ್ದಾರೆ.

ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ

ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆದು ಶಾಶ್ವತವಾಗಿ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ. ಈ ನಿಟ್ಟಿನಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವಿಶೇಷ ಕಾಳಜಿ ತೋರಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಅವರು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರ ಗಮನಕ್ಕೆ ತಂದಿದ್ದಾರೆ. ದಶಕಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರಯತ್ನಿಸಲಾಗುತ್ತಿದೆ.

ಸಂಕೇತ್ ಪೂವಯ್ಯ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ

ಕೊಡಗಿನಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ಹಲವು ದಶಕಗಳ ಸಮಸ್ಯೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ. ಸ್ಥಳೀಯರು ಮತ್ತು ತಜ್ಞರ ಜತೆಗೆ ಸಮಾಲೋಚಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುವುದು. ಹಂತ ಹಂತವಾಗಿ ಯೋಜನೆ ಜಾರಿ ಮಾಡಲಾಗುತ್ತಿದೆ. ಸಮಸ್ಯೆ ಪರಿಹಾರ ಆಗುತ್ತದೆ ಎನ್ನುವ ವಿಶ್ವಾಸ ಇದೆ.

ಧರ್ಮಜ ಉತ್ತಪ್ಪ, ಅಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net