

ಕುಶಾಲನಗರ:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯ ಸೀಗೆಹೊಸೂರು, ಜೇನುಕಲ್ಲು ಬೆಟ್ಟದ ಸುತ್ತ ಕಳೆದ ಕೆಲವು ವಾರಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದೆ. ಈ ವ್ಯಾಪ್ತಿಯ ರೈತರು ಬೆಳೆದಿರುವ ಫಸಲಿಗೆ ಬಂದ ೫೦ ಕ್ಕೂ ಹೆಚ್ಚು ಅಡಿಕೆ ಮರಗಳು, ಜೋಳದ ಬೆಳೆ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳು ಕಾಡಾನೆಗಳ ಹಾವಾಳಿಗೆ ನಾಶವಾಗಿದೆ.
ಸೀಗೆಹೊಸೂರು ಗ್ರಾಮದ ಕುಶಾಲ್, ನಾಗರಾಜ, ಪಾರ್ವತಮ್ಮ ,ಸೇರಿದಂತೆ ಹಲವು ರೈತರ ಜಮೀನುಗಳಿಗೆ ಬಾಣವಾರ ಮೀಸಲು ಅರಣ್ಯ ಪ್ರದೇಶ ಕಡೆಯಿಂದ ಬಂದಿರುವ ಕಾಡಾನೆಗಳು ಜೇನುಕಲ್ಲು ಬೆಟ್ಟದ ಕಾಡಂಚಿನಲ್ಲಿ ದಾಳಿ ಮಾಡಿ, ಅಪಾರ ಪ್ರಮಾಣದ ಬೆಳೆ ನಷ್ಟ ಪಡಿಸಿವೆ. ಸ್ಧಳಕ್ಕೆ ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಅನಂತ, ಚಂದ್ರು, ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿ ಭರತ್ ಸೇರಿದಂತೆ ಸಿಬ್ಬಂದಿ ಪರಿಶೀಲನೆ ನಡೆಸಿ, ಪರಿಹಾರವನ್ನು ನೀಡುವ ಭರವಸೆ ನೀಡಿದ್ದಾರೆ.
ಮತ್ತೊಂದು ಕಡೆ ಕುಶಾಲನಗರ ತಾಲೂಕು ಮರೂರು ಗ್ರಾಮದಲ್ಲಿ ಒಕ್ಕಲು ಮಾಡಿ ಕಣದಲ್ಲಿ ದಾಸ್ತಾನಿರಿಸಿದ್ದ ೨೫ ಚೀಲ ಭತ್ತವನ್ನು ಕಾಡಾನೆಗಳ ಹಿಂಡು ತಿಂದು ಚೆಲ್ಲಾಡಿ ಹಾನಿ ಪಡಿಸಿದೆ.
ಗ್ರಾಮದ ಬಡ ರೈತ ಹೆಚ್.ಎಸ್. ಭಿಕ್ಷೇಶ್ ಎಂಬವರು ತಮ್ಮ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ಒಕ್ಕಲು ಮಾಡಿ ಚೀಲದಲ್ಲಿ ತುಂಬಿ ಕತ್ತಲಾಯಿತೆಂದು ತಡರಾತ್ರಿ ಮನೆಗೆ ಮರಳಿದ್ದರು.
ಬೆಳಗ್ಗೆ ಭತ್ತದ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳಲು ಸಿದ್ಧತೆ ನಡೆಸಿದ್ದ ರೈತ ಭಿಕ್ಷೇಶ್ ಕಾಡಾನೆಗಳ ಹಿಂಡು ಮಾಡಿದ್ದ ಹಾನಿಯನ್ನು ಕಂಡು ಕಂಗಾಲಾಗಿದ್ದಾರೆ. ವರ್ಷವಿಡೀ ಮನೆ ಮಕ್ಕಳು ಊಟ ಮಾಡಲೆಂದು ಕಷ್ಟ ಪಟ್ಟು ಸಾಲ ಸೋಲ ಮಾಡಿ ಹಣ ತಂದು ಖರ್ಚು ಮಾಡಿ ಬೆಳೆದಿದ್ದ ಭತ್ತದ ಫಸಲು ಕಾಡಾನೆಗಳ ಪಾಲಾಯಿತಲ್ಲ ಎಂದು ಕಣದಲ್ಲಿ ಕುಳಿತು ಕಂಬನಿ ಗರೆದಿದ್ದಾರೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮರೂರು, ಚಿನ್ನೇನಹಳ್ಳಿ ವ್ಯಾಪ್ತಿಯಲ್ಲಿ ನಿತ್ಯವೂ ರಾತ್ರಿ ಯಾಯಿತೆಂದರೆ ಲಗ್ಗೆ ಇಡುವ ಕಾಡಾನೆ ಹಿಂಡು ರೈತರ ಬೆಳೆಗಳನ್ನು ಬೆಳೆದ ಫಸಲನ್ನು ಹಾನಿ ಮಾಡಿ ಮರಳುತ್ತಿವೆ.