

ಕುಶಾಲನಗರ: ಕಾಡಾನೆಗಳು ಜಮೀನಿಗೆ ದಾಳಿ ಮಾಡುವುದನ್ನು ತಡೆಗಟ್ಟಲು ಅನುಸರಿಸಬಹುದಾದ ಕ್ರಮಗಳ ಕುರಿತು ಕೂಡಿಗೆ ಗ್ರಾಪಂ ವ್ಯಾಪ್ತಿಯ ಹುದುಗೂರಿನಲ್ಲಿ ಅರಣ್ಯ ಇಲಾಖೆಯ ವತಿಯಿಂದ ಶುಕ್ರವಾರ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಅರಣ್ಯ ಇಲಾಖೆ ನಿವೃತ್ತ ಪಶು ವೈದ್ಯಾಧಿಕಾರಿ ಡಾ.ಆದಿತ್ಯ ರುದ್ರ ಅವರು ಗ್ರಾಮದ ಮೈದಾನದಲ್ಲಿ
ಪ್ರಾತ್ಯಕ್ಷಿಕೆ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಈ ಭಾಗದಲ್ಲಿ ಕಾಡಾನೆಗಳು ಆಗಾಗ್ಗೆ ಜಮೀನಿಗೆ ದಾಳಿ ಮಾಡುತ್ತಿವೆ. ಆನೆಗಳು ಜಮೀನಿಗೆ ಬರುವ ಮಾರ್ಗದಲ್ಲಿ ಒಂದು ಚೀಲದಲ್ಲಿ ಸ್ವಲ್ಪ ಒಣಹುಲ್ಲು, ಮೆಣಸಿನ ಪುಡಿಯನ್ನು ತುಂಬಿ, ಹೊಗೆ ಹಾಕಿ ಅದು ಗಾಳಿಯಲ್ಲಿ ಚನ್ನಾಗಿ ಹರಡುವಂತೆ ಮಾಡಬೇಕು. ಮೆಣಸಿನ ಪುಡಿ ಘಾಟು ವಾಸನೆ ತಡೆಯಲಾಗದ ಕಾಡಾನೆಗಳು ಜಮೀನಿನಿಂದ ದೂರ ಹೋಗುತ್ತವೆ ಎಂದರು.
ಆನೆಗೆ ಮದ ಬರುವ ಸಂದರ್ಭ, ಮನುಷ್ಯನ ಬೆವರಿನ ವಾಸನೆಯನ್ನು ಗೃಹಿಸುವ ಶಕ್ತಿ, ಅಹಾರ ಅರಸಿ ಸ್ಥಳದಿಂದ ಸ್ಥಳಕ್ಕೆ ಓಡಾಟ ಇತ್ಯಾದಿ ಬಗ್ಗೆ ಅವರು ವಿವರಿಸಿದರು. ಉಮಾಮಹೇಶ್ವರ ದೇವಾಲಯ ಸಮಿತಿ ಉಪಾಧ್ಯಕ್ಷ ಮುತ್ತಪ್ಪ, ಯುವಕ ಸಂಘದ ಅಧ್ಯಕ್ಷ ಶರತ್, ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ರವಿ, ಹುದುಗೂರು ಉಪವಲಯ ಅರಣ್ಯಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ ಇದ್ದರು. ಗ್ರಾಮಸ್ಥರು, ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.