ಎರಡು ವಾರದಲ್ಲಿ ಮೂರು ಬಲಿ

28mdk01
Published on

ಮಡಿಕೇರಿ:

ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಹೊಸದಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಸಹಿಸಲಾರದಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ೨ ವಾರಗಳಲ್ಲಿ ಮೂವರು ಆನೆ ದಾಳಿಗೆ ಬಲಿಯಾಗಿದ್ದಾರೆ.

ಕಾಫಿ ತೋಟಗಳಲ್ಲಿ ಅಡ್ಡಾಡುವ ಆನೆಗಳಿಂದ ಆಗುವ ಹಾನಿ ಲೆಕ್ಕಕ್ಕೇ ಸಿಗದಷ್ಟು ಏರಿಕೆ ಆಗುತ್ತಿದೆ. ಮೊದಲೆಲ್ಲಾ ರಾತ್ರಿ ಮಾತ್ರ ಕಾಡಿನಿಂದ ಹೊರಬರುತ್ತಿದ್ದ ಆನೆಗಳು ಈಗ ಯಾವುದೇ ಭಯ ಇಲ್ಲದೆ ಹಗಲಿನಲ್ಲೂ ಜನವಸತಿ ಪ್ರದೇಶಗಳಲ್ಲಿ ಅಡ್ಡಾಡಲಾರಂಭಿಸಿವೆ. ಇತ್ತೀಚೆಗೆ ಮೃತರಾದ ಮೂವರನ್ನು ಕೂಡ ಆನೆಗಳು ಹಗಲಿನ ಹೊತ್ತಿನಲ್ಲೇ ಸಾಯಿಸಿವೆ.

ಆನೆಗಳು ಎಷ್ಟು ಹೊತ್ತಿಗೆ ಎಲ್ಲಿ ಬಂದು ದಾಳಿ ಮಾಡುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ಕಾರ್ಮಿಕರು ತೋಟದ ಕೆಲಸಗಳಿಗೆ ಬರಲು ಹಿಂಜರಿಯುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಸಮಯಕ್ಕೆ ಸರಿಯಾಗಿ ಆಗಬೇಕಾದ ಅಗತ್ಯ ಕೆಲಸಗಳು ನೆನೆಗುದಿಗೆ ಬೀಳುತ್ತಿದೆ. ಕಾಂಡ ಕೊಳೆಯುವ ರೋಗಕ್ಕೆ ಉಪಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಬೇಕಾಗುತ್ತದೆ. ಆದರೆ ಈ ಸಮಸ್ಯೆ ಜಾಸ್ತಿ ಇರುವ ಪೊನ್ನಂಪೇಟೆ ತಾಲೂಕು ಭಾಗದಲ್ಲಿ ಆನೆಗಳ ಉಪಟಳದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಬೆಳೆದ ಬೆಳೆ ಆನೆಗಳ ಹಾವಳಿಯಿಂದಾಗಿ ಮನೆ ಸೇರುವುದಿಲ್ಲ ಎನ್ನುವ ಕಾರಣಕ್ಕೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭತ್ತದ ಕೃಷಿಯನ್ನೇ ಕೈ ಬಿಡಲಾಗಿದೆ. ಕಾಡಾನೆಗಳು ಕಾಡು ಬಿಟ್ಟು ಕಾಫಿ ತೋಟ ಸೇರಿಕೊಂಡರೆ ಮುಂದಿನ ದಿನಗಳಲ್ಲಿ ಕಾಫಿ ಬೆಳೆಯುವವರ ಸಂಖ್ಯೆಯೂ ಕಡಿಮೆ ಆಗುವ ಸಾಧ್ಯತೆ ಇದೆ. ಅರಣ್ಯ ಸಚಿವರ ಮಾಹಿತಿ ಪ್ರಕಾರ ಕೊಡಗಿನಲ್ಲಿ
ಸಾವಿರಕ್ಕೂ ಅಧಿಕ ಆನೆಗಳಿವೆ. ಈ ಪೈಕಿ ಸುಮಾರು ೨೦೦ರಷ್ಟು ಆನೆಗಳು ಕಾಡಿನಿಂದ ಹೊರಗೆ ಇವೆ. ಇವುಗಳನ್ನೆಲ್ಲಾ ಕಾಡಿಗೆ ಅಟ್ಟಿ ಕಾಡಂಚಿನಲ್ಲಿ ರೈಲ್ವೆ ಕಂಬಿಯ ಬೇಲಿ ಅಳವಡಿಸಿದರೆ ಸಮಸ್ಯೆ ಬಹುತೇಕ ಕಡಿಮೆ ಆಗಲಿದೆ ಎನ್ನುವ ಅಭಿಪ್ರಾಯಗಳು ಇದೆ. ಆದರೆ ಕಾಫಿ ತೊಟಗಳಿಂದ ಆನೆಗಳನ್ನು ಓಡಿಸುವುದು ಅಷ್ಟು ಸುಲಭವಲ್ಲ. ಪುಂಡಾನಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಬಗ್ಗೆಯೂ ಸಲಹೆಗಳು ಕೇಳಿಬರುತ್ತಿದೆ.

ಆನೆ-ಮಾನವ ಸಂಘರ್ಷ ತಡೆಗಟ್ಟಲು ಶಾಶ್ವತ ಪರಿಹಾರಕ್ಕೆ ವೈಜ್ಞಾನಿಕ ಅಧ್ಯಯನದ ಅಗತ್ಯವಿದ್ದು, ಈ ಮೂಲಕ ಆನೆ ಪೀಡಿತ ಪ್ರದೇಶದ ಜನತೆಗೆ ನೆಮ್ಮದಿಯ ಬದುಕು ನೀಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

ಕಾಡಾನೆಗಳು ತಿಂದು ಉಳಿಸಿದ ಕೃಷಿ ಫಸಲನ್ನು ರೈತರು ತೆಗೆದುಕೊಳ್ಳಬೇಕಾಗಿದೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಒಂದೂವರೆ ತಿಂಗಳು ಕಾಡಾನೆಗಳು ಇದ್ದವು. ಬಾಳೆಗಿಡ ಸೇರಿದಂತೆ ಎಲ್ಲವನ್ನೂ ತಿಂದು ಮುಗಿಸಿವೆ. ಯಾವುದಕ್ಕೂ ಪರಿಹಾರವಿಲ್ಲ. ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು ಗೊತ್ತಿಲ್ಲ. ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಹೆದರಿಕೆಯಾಗುತ್ತದೆ.
ಅಜ್ಜಮಕ್ಕಡ ಮಾದಪ್ಪ, ಕಿಕ್ಕರಳ್ಳಿ ಗ್ರಾಮ

ಕಾಡಾನೆಗಳ ಹಾವಳಿ ನಿರಂತರವಾಗಿ ಮುಂದುವರಿದಿದೆ. ಭತ್ತದ ಪೈರು ತಿನ್ನುತ್ತವೆ. ಕೃಷಿ ಮಾಡುವುದೇ ಕಷ್ಟವಾಗಿದೆ. ಕೆಲವೊಮ್ಮೆ ರಸ್ತೆ, ತೋಟದಲ್ಲೇ ಕಾಣಸಿಗುತ್ತವೆ. ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸುವುದಕ್ಕೂ ಭಯವಾಗುತ್ತದೆ. ಕಾಡಿನಲ್ಲಿ ಆಹಾರ ಸಿಗದ ಕಾರಣ ನಾಡಿಗೆ ಬರುತ್ತಿವೆ. ಕೃಷಿ ಫಸಲನ್ನು ಕಳೆದುಕೊಂಡು ಜೀವನ ಸಾಗಿಸುವುದು ಹೇಗೆ ? ರೈತರಿಗೆ ಪಿಂಚಣಿ ಸೌಲಭ್ಯ ಓದಗಿಸಬೇಕು.
ಅಪ್ಪುಡ ಚಂಗಪ್ಪ, ಸೂರ್ಲಬ್ಬಿ ಗ್ರಾಮ.

ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ಮನು?್ಯನ ಮೇಲೆ ದಾಳಿ ಮಾಡುತ್ತಿರುವುದು ದುರಂತ. ಪ್ರಾಣ ಹಾನಿ ಸಂಭವಿಸಿದರೆ ಸರ್ಕಾರ ಪರಿಹಾರ ನೀಡುತ್ತಾದರೂ. ಹೋದ ಪ್ರಾಣ ಬರುವುದಿಲ್ಲ. ಜಿಲ್ಲೆಯಲ್ಲಿ ಯಾವ ಯಾವ ಭಾಗದಲ್ಲಿ ಕಾಡಾನೆಗಳು ಮಿತಿಮೀರಿದೆ ಎಂದು ಸರಿಯಾದ ರೀತಿಯಲ್ಲಿ ಸರ್ವೆ ನಡೆಸಿ ಸರ್ಕಾರಕ್ಕೆ ನೈಜ ವರದಿ ನೀಡಬೇಕು. ಸರ್ಕಾರ ಕಾಡಾನೆಗಳನ್ನ ಹಿಡಿದು ಬೇರೆಡೆ ಹೆಚ್ಚು ಅರಣ್ಯ ಪ್ರದೇಶವಿರುವ ಪ್ರದೇಶಕ್ಕೆ ಬಿಡಬೇಕು.
ಭರತ್, ಹುಲುಸೆ, ಶನಿವಾರಸಂತೆ.

ದುಂಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಹೆಚ್ಚಾಗಿದ್ದು ಅರಣ್ಯ ಇಲಾಖೆಯವರು ಒಂದೆಡೆಯಿಂದ ಓಡಿಸಿದರೆ ಮತ್ತೊಂದೆಡೆ ಹೋಗುತ್ತದೆ. ಈಗಾಗಲೇ ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿ ಮನು?್ಯನ ಮೇಲೆ ಕಾಡಾನೆ ದಾಳಿ ಮಾಡಿ ಪ್ರಾಣವನ್ನೇ ತೆಗೆದಿದೆ. ಈ ಭಾಗದಲ್ಲಿ ಇಂಥ ಘಟನೆ ಸಂಭವಿಸುವ ಮುನ್ನ ಸರ್ಕಾರ ಇಲ್ಲಿ ಬಿಡು ಬಿಟ್ಟಿರುವ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಬಿಡುವ ಕೆಲಸ ಮಾಡಬೇಕು.
ದೇವರಾಜು, ಗ್ರಾಮ ಪಂಚಾಯ್ತಿ ಸದಸ್ಯ, ದುಂಡಳ್ಳಿ

ದಕ್ಷಿಣ ಕೊಡಗಿನ ಭಾಗದಲ್ಲಿ ಮೊದಲು ಹೆಚ್ಚು ಭತ್ತದ ಗದ್ದೆಗಳು ಇದ್ದವು. ಆದರೆ ಈಗ ಕಾಡಾನೆಗಳ ಹಾವಳಿಯಿಂದ ಎಲ್ಲರೂ ಭತ್ತ ಕೃಷಿಯನ್ನು ಕೈ ಬಿಟ್ಟಿದ್ದಾರೆ. ರಾತ್ರಿ ಹೋಗಲಿ, ಹಗಲೂ ಕೂಡ ನಮಗೆ ಮನೆಯಿಂದ ಹೊರಗೆ ಬರಲು ಹೆದರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪರೋಕ್ಷವಾಗಿ ಇದು ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ.
ಕೆ.ಜೆ. ಮಧು, ಕೃಷಿಕ, ಮಾಯಮುಡಿ

ಬೆಲೆ ಏರಿಕೆ, ಕೂಲಿ ಕಾರ್ಮಿಕರ ಸಂಬಳ ಇತ್ಯಾದಿ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಕೃಷಿ ಕ?್ಟಕರವಾಗುತ್ತಿದೆ. ಈಗ ಈ ಸಾಲಿಗೆ ಕಾಡಾನೆಗಳು ಸೇರಿವೆ. ಮೊದಲು ರಾತ್ರಿ ಮಾತ್ರ ಬರುತ್ತಿದ್ದ ಆನೆಗಳು ಈಗ ನಿರ್ಭಯವಾಗಿ ಹಾಡಹಗಲೇ ತಿರುಗಾಡುತ್ತಿದೆ. ಇದರಿಂದ ಕೆಲಸದವರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ಮಾಡಬೇಕು.
ಕತ್ರಿಕೊಲ್ಲಿ ಅನಿತಾ ವಿಶ್ವನಾಥ್, ಗೋಣಿಕೊಪ್ಪಲು

ಈಗಾಗಲೇ ಕೊಡಗಿನ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವುದರಿಂದ ಆನೆ ಮಾನವ ಸಂಘ?ರ್ಕ್ಕೆ ಶಾಶ್ವತ ಪರಿಹಾರ ಸಿಗಬಹುದು. ಬಳಿಕ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು. ಈ ಕೆಲಸ ಮಾಡಿದರೆ ಒಂದು ಶಾಶ್ವತ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬಹುದು. ಈ ಕೆಲಸ ಬರೇ ರಾಜ್ಯ ಸರ್ಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಕೇಂದ ಸರ್ಕಾರವೂ ಒಟ್ಟಿಗೆ ಸೇರಿ ಯೋಜನೆ ರೂಪಿಸಬೇಕು.
ಗೋಪಾಲಕೃ?್ಣ, ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಕಿಸಾನ್ ಘಟಕ

ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಒಂದು ಸ್ಥಳದ ವ್ಯಾಪ್ತಿಗೆ ಸೀಮಿತಗೊಳಿಸಬಾರದು. ಸಮಸ್ಯೆ ಇರುವ ಕಡೆಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಬೇಕು. ಈ ಮೂಲಕ ಆನೆಗಳನ್ನು ಶಾಶ್ವತವಾಗಿ ಕಾಡಿಗೆ ಅಟ್ಟುವ ಕೆಲಸ ಮಾಡಬೇಕು.
ಮಹಮ್ಮದ್ ಅಲಿ, ಸದಸ್ಯ, ಮಾಲ್ದಾರೆ ಗ್ರಾಮ ಪಂಚಾಯಿತಿ

ಅರಣ್ಯ ಇಲಾಖೆ ರೇಡಿಯೋ ಕಾಲರ್ ಅಳವಡಿಸಿರುವ ಆನೆಗಳ ಬಗ್ಗೆ ದಿನದ ೨೪ ಗಂಟೆಯೂ ನಿಗಾ ಇಡಬೇಕು. ಆನೆ ಹಿಡಿದ ನಂತರ ಅವುಗಳಿಗೆ ರೇಡಿಯೋ ಕಾಲರ್ ಹಾಕಬೇಕು ಇದರಿಂದ ಪ್ರಾಣ ಹಾನಿ ಮತ್ತು ಬೆಳೆ ಹಾನಿ ತಡೆಯಬಹುದು. ಅರಣ್ಯದೊಳಗೆ ನೀಲಗಿರಿ, ತೇಗದ ಮರ ಹೆಚ್ಚಾಗಿವೆ. ಆನೆಗಳಿಗೆ ಸೊಪ್ಪು ಆಹಾರ ಸಿಗುತ್ತಿಲ್ಲ. ಹೀಗಾಗಿ ಅವು ಕಾಡಿನಿಂದ ನಾಡಿಗೆ ಬರುತ್ತಿವೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯದೊಳಗೆ ಆನೆಗಳಿಗೆ ಆಹಾರ ಸಿಗುವಂಥ ಗಿಡ ನೆಡುವ ಬಗ್ಗೆ ಚಿಂತಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಈಶ್ವರ ಬಿ. ಖಂಡ್ರೆ, ಪರಿಸರ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ

ಕಾಡಾನೆಗಳನ್ನು ಸೆರೆ ಹಿಡಿಯುವುದು ರೈತರ ಕಣ್ಣೊರೆಸುವ ತಂತ್ರವಾಗಿದೆ. ಸೆರೆ ಹಿಡಿದ ಆನೆಗೆ ರೇಡಿಯೋ ಕಾಲರ್ ಅಳವಡಿಸಿ ದೂರದ ಕಾಡಿಗೆ ಸ್ಥಳಾಂತರ ಮಾಡಿದರೂ ಕೆಲವೇ ದಿನಗಳಲ್ಲಿ ಮರಳಿ ಕೊಡಗಿಗೆ ಬರುತ್ತಿದೆ. ಮತ್ತೆ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡು ಕೃಷಿ ಫಸಲುಗಳನ್ನು ನಾಶ ಮಾಡುವ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ. ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಕಾರ್ಯಯೋಜನೆ ರೂಪಿಸಬೇಕು.
ಇಟ್ಟಿರ ಸಬಿತಾ, ಕಾರ್ಯದರ್ಶಿ, ರೈತ ಸಂಘ

ಆನೆ ಮಾನವ ಸಂಘರ್ಷ ನಡೆಯುತ್ತಿರುವುದು ಎಷ್ಟು ಸತ್ಯವೋ ಈ ಸಂಘರ್ಷಕ್ಕೆ ಮಾನವರೇ ನೇರ ಹೊಣೆ ಎನ್ನುವುದು ಕೂಡ ಅಷ್ಟೇ ಸತ್ಯ. ಮಾನವರು ಕಾಡಿನ ಪ್ರದೇಶವನ್ನು ಅಕ್ರಮಿಸಿಕೊಂಡು ಇರುವುದೇ ಇದಕ್ಕೆಲ್ಲ ಕಾರಣ. ಅರಣ್ಯ ಪ್ರದೇಶದಲ್ಲಿ ಹಣ್ಣಿನ ಮರ ಬೆಳೆಸಲು ಇಲಾಖೆ ಕ್ರಮಕೈಗೊಳ್ಳಬೇಕು.
ಡಿ. ನರಸಿಂಹ, ಉದ್ಯಮಿ, ಸುಂಟಿಕೊಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net