ಹೊಸನಗರದಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು

IMG-20250916-WA0169
ಅರಕಲಗೂಡು ತಾಲೂಕಿನ ಹೊಸನಗರದಲ್ಲಿ ಮಂಗಳವಾರ ಗುಂಪಾಗಿ ರಸ್ತೆ ದಾಟುತ್ತಿರುವ ಕಾಡಾನೆಗಳು.
Published on

ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿ ಹೊಸನಗರ ಭಾಗದಲ್ಲಿ ಮಂಗಳವಾರ ಕಾಡಾನೆಗಳು ಬೀಡುಬಿಟ್ಟಿದ್ದು, ಬೆಳೆಗಳನ್ನು ತುಳಿದು ರೈತರಲ್ಲಿ ಆತಂಕ ಮೂಡಿಸಿವೆ.

ಹೊಸನಗರ, ಬೀರನಹಳ್ಳಿ ಕಾವಲು ಬಳಿ ಬೆಳಗ್ಗೆ ಪ್ರತ್ಯಕ್ಷವಾದ ಐದು ಕಾಡಾನೆಗಳು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದವು. ಕೊಡಗು ಗಡಿಭಾಗದ ಕಾಡಂಚಿನಿಂದ ಬಂದಿರುವ ಆನೆಗಳು ನಸುಕಿನಲ್ಲೇ ಹೊಸನಗರ ಸುತ್ತಮುತ್ತಲ ಭಾಗದ ಹಳ್ಳಿಗಳಲ್ಲಿ ಸುತ್ತಾಡಿ, ಬೆಳೆಗಳನ್ನು ತಿಂದು ತುಳಿದು ನಾಶಪಡಿಸಿವೆ. ಮುಸುಕಿನ ಜೋಳ, ಶುಂಠಿ, ಭತ್ತದ ಗದ್ದೆಗಳನ್ನು ತುಳಿದ ಪರಿಣಾಮ ಅಪಾರ ಹಾನಿಯಾಗಿದೆ. ಭತ್ತದ ಪೈರುಗಳನ್ನು ನಾಶಪಡಿಸಿವೆ ಎಂದು ರಂಗನಾಥಪುರ ರೈತ ಪುಟ್ಟಸ್ವಾಮಿಗೌಡ ಅಳಲು ತೋಡಿದ್ದಾರೆ.

ಹೊಸನಗರದಲ್ಲಿ ಬೆಳಗ್ಗೆ ಗುಂಪಾಗಿ ರಸ್ತೆ ದಾಟುತ್ತಿದ್ದ ಮೂರು ಹೆಣ್ಣಾನೆ ಹಾಗೂ ಎರಡು ಮರಿಯಾನೆಯನ್ನು ಸ್ಥಳೀಯರು ಬೆದರಿಸಿ ಓಡಿಸತೊಡಗಿದರು. ಜಮೀನು ಮೇಲೆ ಅಡ್ಡಾದಿಡ್ಡಿ ಓಡಾಡಿದ ಆನೆಗಳು ನಂತರ ಮುಸುಕಿನ ಜೋಳದ ಹೊಲದಲ್ಲಿ ನಿಂತು ಸಂಜೆ ತನಕವೂ ಜಾಗ ಬಿಟ್ಟು ಕದಲಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆನೆಗಳನ್ನು ಕಾಡಿನತ್ತ ಅಟ್ಟಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಮತ್ತೆ ರಾತ್ರಿ ಇನ್ನಷ್ಟು ಬೆಳೆಗಳನ್ನು ತುಳಿದು ಹಾನಿಪಡಿಸುವ ಆತಂಕ ರೈತರನ್ನು ಕಾಡಿದೆ.

ತರಿಗಳಲೆ ಬಳಿ ಸತ್ತೆಹಳ್ಳದಲ್ಲಿ ರಾತ್ರಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿಯಿಡಿ ಪಟಾಕಿ ಸಿಡಿಸಿದ್ದಾರೆ. ಬೆಳಗ್ಗೆ ಹೊಸನಗರ ಬಳಿ ಕಾಣಿಸಿಕೊಂಡಿರುವ ಐದು ಕಾಡಾನೆಗಳು ಮುಸುಕಿನ ಜೋಳದ ಹೊಲದಲ್ಲಿ ನಿಂತಿದ್ದು ಕಾಡಿಗಟ್ಟಲು ಸಾಧ್ಯವಾಗಲಿಲ್ಲ ಎಂದು ಅರಣ್ಯ ಅಧಿಕಾರಿ ಮಹೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net