

ಬೇಲೂರು : ವಜ್ಯ ಜೀವಿಗಳ ಚಲನವಲನ ಗಮನಿಸುತಿದ್ದ ಇಟಿಎಫ್ ಸಿಬ್ಬಂದಿಯನ್ನೇ ಕಾಡಾನೆ ಅಟ್ಟಾಡಿಸಿದ್ದರಿಂದ ಕೆಲ ಹೊತ್ತು ಆತಂಕ ಉಂಟಾಗಿತ್ತು. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಇಬ್ಬರೂ ಪಾರಾಗಿರುವ ಘಟನೆ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೇಲೂರು ತಾಲೂಕಿನ ಅರೇಹಳ್ಳಿ ಸಮೀಪದ ಜ್ಯುಲ್ಫಿ ಎಂಬುವವರ ಕಾಫಿ ತೋಟದಲ್ಲಿ ಗುಂಪಿನಿಂದ ಬೇರ್ಪಟ್ಟ ವಿಕ್ರಾಂತ್ ಹೆಸರಿನ ಒಂಟಿ ಕಾಡಾನೆ ಬೆಳಗಿನ ಸಮಯದಲ್ಲಿ ಓಡಾಡುತ್ತಿತ್ತು. ಆದರೆ ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಸುನೀಲ್ ಹಾಗೂ ಪ್ರಶಾಂತ್ ಎಂಬುವವರು ಈ ಕಾಡಾನೆಯ ಚಲನ ವಲನ ವೀಕ್ಷಿಸುತ್ತಿದ್ದರು. ಈ ಸಂದರ್ಭ ಏಕಾಏಕಿ ಇಬ್ಬರು ಸಿಬ್ಬಂದಿ ನೋಡಿದ ಆನೆ ಅವರನ್ನೂ ಓಡಿಸಿಕೊಂಡು ಬಂದಿದೆ. ಇವರೊಂದಿಗೆ ದೂರದಲ್ಲಿದ್ದ ಇತರೆ ಸಿಬ್ಬಂದಿಯೂ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಗಮನ ಹರಿಸಬೇಕಿದೆ : ಕಾಡಾನೆ ಇಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದ್ದು ನೋಡಿದರೆ ಮೈ ಜುಮ್ಮೆನ್ನುವಂತಿತ್ತು. ಜತೆಗೆ ದೊಡ್ಡ ದುರಂತ ತಪ್ಪಿದಂತಾಗಿದೆ. ರೊಚ್ಚಿಗೆದ್ದಿರುವ ವಿಕ್ರಾಂತ್ ಎಂಬ ಕಾಡಾನೆಯನ್ನು ಸಾಕಾನೆಗಳ ಗುಂಪಿಗೆ ಸೇರಿಸಬೇಕು. ಇಲ್ಲವೇ ಆದಷ್ಟು ಬೇಗ ಹಿಡಿದು ದೂರದ ಕಾಡಿಗೆ ಬಿಟ್ಟರೆ ಒಳಿತು. ಇಲ್ಲದಿದ್ದಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಮುಂದಾಗಿ ಏನಾದರೂ ಅನಾಹುತವಾಗಬಹುದು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ. ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಅವರನ್ನು ರಕ್ಷಿಸುವತ್ತ ಗಮನ ಹರಿಸಬೇಕಿದೆ ಎಂದು ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.