

ರವಿ ಬಿದನೂರು ಹೊಸನಗರ
ಕಳೆದ ನಾಲ್ಕು ವರ್ಷದ ಹಿಂದೆ ಕಾಣಿಸಿಕೊಂಡ ಎಲೆಚುಕ್ಕೆ ರೋಗ ಇಡೀ ಮಲೆನಾಡನ್ನು ಬಾಧಿಸುತ್ತಿದ್ದು ಅಡಕೆ ಬೆಳೆಗಾರರು ತಲ್ಲಣಗೊಂಡಿದ್ದಾರೆ. ರೋಗಬಾಧೆಯಲ್ಲಿ ಹೊಸನಗರ ತಾಲೂಕು ಪ್ರಥಮ ಸ್ಥಾನದಲ್ಲಿದ್ದರೆ, ತೀರ್ಥಹಳ್ಳಿ ತಾಲೂಕು ಎರಡನೇ ಸ್ಥಾನದಲ್ಲಿದೆ.
ಅಡಕೆಗೆ ಎಲೆಚುಕ್ಕೆ ರೋಗ ಇನ್ನಿಲ್ಲದಂತೆ ಬಾಧಿಸುತ್ತಿದೆ. ತೋಟಗಾರಿಕಾ ಇಲಾಖೆಯ ಹತೋಟಿ ಕ್ರಮ, ವಿಜ್ಞಾನಿಗಳ ಅಧ್ಯಯನ, ಸಲಹೆ ಇವೆಲ್ಲನ್ನು ಸಮೀಕರಿಸಿ ಬೆಳೆಗಾರರು ಅಡಕೆ ಬೆಳೆಯನ್ನು ಸಂರಕ್ಷಣೆ ಮಾಡುವ ಪ್ರಯತ್ನ ಮುಂದುವರಿಸಿದ್ದಾರೆಯೇ ಹೊರತು ಯಾವುದೇ ಫಲಶ್ರುತಿ ಸಿಗದಿರುವುದು ಕೃಷಿಕರ ಹೈರಾಣಾಗಿಸಿದೆ.
ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಸೇರಿದಂತೆ 7 ಜಿಲ್ಲೆಗಳ ಒಟ್ಟು 42 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕೆ ರೋಗ ಕಾಣಿಸಿಕೊಂಡಿತ್ತು. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 13,093 ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕೆ ಬಾಧಿಸುತ್ತಿದೆ. ಜಿಲ್ಲೆಯಲ್ಲಿ ಅವಲೋಕಿಸಿದರೆ ಹೊಸನಗರ ತಾಲೂಕಿನಲ್ಲಿ ಅತಿ ಹೆಚ್ಚು ತೋಟಗಳು ಹಾನಿಗೀಡಾಗಿವೆ. ನಂತರದ ಸ್ಥಾನ ತೀರ್ಥಹಳ್ಳಿ ತಾಲೂಕಿನದ್ದು.
ಎಲೆಚುಕ್ಕೆ ರೋಗ ಬಾಧೆಗೆ ಅಕ್ಷರಶಃ ಅತಂತ್ರಗೊಂಡ ಪ್ರದೇಶ ಎಂದರೆ ಹೊಸನಗರ ತಾಲೂಕಿನ ನಗರ ಹೋಬಳಿ. ತಾಲೂಕಿನ 4,580 ಹೆಕ್ಟೇರ್ ಪ್ರದೇಶದಲ್ಲಿ ರೋಗ ಕಂಡು ಬಂದರೆ, ಅರ್ಧಕ್ಕಿಂತ ಹೆಚ್ಚು ಭಾಗ ನಗರ ಹೋಬಳಿಯಲ್ಲೇ ಇದೆ. ನಗರ ಹೋಬಳಿಯ 2,780 ಹೆಕ್ಟೇರ್ ಪ್ರದೇಶದಲ್ಲಿ ಅಡಕೆಗೆ ಎಲೆಚುಕ್ಕೆ ರೋಗ ಬಾಧಿಸಿದೆ. ಉಳಿದಂತೆ ಹುಂಚಾ ಹೋಬಳಿಯಲ್ಲಿ 880 ಹೆಕ್ಟೇರ್, ಕಸಬಾ ಹೋಬಳಿಯಲ್ಲಿ 520 ಹೆಕ್ಟೇರ್, ಕೆರೆಹಳ್ಳಿ ಹೋಬಳಿಯ 400 ಹೆಕ್ಟೇರ್‌ನಲ್ಲಿ ರೋಗ ಜೀವಂತವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೋಗ ಕಡಿಮೆ ಆಗಿಲ್ಲ. ಆದರೆ ನಿಯಂತ್ರಣದಲ್ಲಿರುವುದು ಸಮಾಧಾನಕರ ಅಂಶ. ಈಬಾರಿ ಬಿಸಿಲಿನ ತೀವ್ರತೆ ಕೂಡ ರೋಗ ನಿಯಂತ್ರಣಕ್ಕೆ ಪ್ರಮುಖ ಕಾರಣ. ಮಳೆಗಾಲ ಆರಂಭವಾಗುತ್ತಿದ್ದಂತೆ ಅಡಕೆ ತೋಟಗಳು ಹಸಿರುಗೊಂಡು ಉತ್ತಮವಾಗಿ ಕಾಣಿಸುತ್ತಿದೆ. ಆದರೆ ಬಿಸಿಲು ಮತ್ತು ಮಳೆಯ ವಾತಾವರಣ ಮುಂದುವರಿದರೆ ಮತ್ತೆ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಏಳು ಜನರ ಅಧ್ಯಯನ ತಂಡ
ಎಲೆಚುಕ್ಕೆ ರೋಗದ ತೀವ್ರ ಹೆಚ್ಚಾಗುತ್ತಿದ್ದಂತೆ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿನ ರೋಗ ಮತ್ತು ನಿರ್ವಹಣ ಕುರಿತ ಅಧ್ಯಯನ ನಡೆಸಲು ಉನ್ನತ ವಿಜ್ಞಾನಿಗಳ ತಂಡವನ್ನು ಕೇಂದ್ರ ರಚನೆ ಮಾಡಿತ್ತು. ಆ ತಂಡದಲ್ಲಿ ಕಾಸರಗೋಡು ಐಸಿಎಆರ್- ಸಿಪಿಸಿಆರ್‌ಐ ನಿರ್ದೇಶಕಿ ಡಾ. ಅನಿತಾ ಕರುಣ್, ಉತ್ಪಾದನೆ ಮತ್ತು ಬೆಳೆ ವಿಭಾಗದ ಡಾ. ರವಿ ಭಟ್, ಬೆಳೆ ರಕ್ಷಣಾ ವಿಭಾಗದ ಡಾ. ವಿನಾಯಕ ಹೆಗ್ಡೆ, ಕಲ್ಕತ್ತದ ಡಿಎಎಸ್‌ಡಿ ನಿರ್ದೇಶಕ ಡಾ. ಹೋಮಿ ಚೆರಿಯನ್, ಸಹಾಯಕ ನಿರ್ದೇಶಕಿ ಡಾ. ಫೆಮಿನಾ, ಶಿವಮೊಗ್ಗ ಕೆಎಸ್‌ಎನ್‌ಯುಎಎಚ್‌ಎಸ್ ನಿರ್ದೇಶಕ ಡಾ. ಎಂ.ವಾಲಿ, ದಕ್ಕಿಣ ಕನ್ನಡ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಆರ್.ನಾಯ್ಕ ಸೇರಿದಂತೆ 7 ಸದಸ್ಯರು ಆ ತಂಡದಲ್ಲಿದ್ದರು. ಸುಳ್ಯ, ಉಡುಪಿ, ಚಿಕ್ಕಮಗಳೂರು, ಕಳಸ, ಶೃಂಗೇರಿ, ಕೊಪ್ಪ, ಹೊಸನಗರ, ನಿಟ್ಟೂರು, ಸಾಗರ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಎಲೆಚುಕ್ಕೆ ರೋಗ ವ್ಯಾಪಿಸಿರುವ 7 ಜಿಲ್ಲೆಗಳ ಹಲವು ಪ್ರದೇಶಗಳಿಗೆ ಭೇಟಿ ನೀಡ ಅಧ್ಯಯನ ನಡೆಸಿದ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರಲ್ಲಿ ರೋಗದ ತೀವ್ರತೆ, ನಿರ್ವಹಣೆ ಕುರಿತ ಅಂಶಗಳಿಗೆ ಒತ್ತು ನೀಡಲಾಗಿತ್ತು. ಅಲ್ಲದೆ ತುರ್ತು ನಿರ್ವಹಣೆಗೆ ರೈತರಿಗೆ ಅಗತ್ಯವಾದ ಔಷಧಗಳು, ಸಿಂಪಡಣೆ ಪರಿಕರಗಳನ್ನು ಒದಗಿಸುವಂತೆ ಶಿಫಾರಸ್ಸು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ, ಈವರ್ಷ 2 ಕೋಟಿ ರೂ. ಮೌಲ್ಯದ ಔಷಧ ಪರಿಕರ ಮತ್ತು ದೋಟಿಯನ್ನು ಸಹಾಯಧನದಲ್ಲಿ ಸರ್ಕಾರ ರೈತರಿಗೆ ನೀಡಿದೆ. 2022ರ ಅಕ್ಟೋಬರ್‌ನಿಂದ ಅಸ್ತಿತ್ವಕ್ಕೆ ಬಂದ ಕೇಂದ್ರ ಅಧ್ಯಯನ ಸಮಿತಿ ಒಟ್ಟು 5 ಬಾರಿ ಸಭೆ ನಡೆಸಿದೆ. ಒಂದು ಬಾರಿ ಶೃಂಗೇರಿಯಲ್ಲಿ ಸಭೆ ನಡೆದರೆ, ಉಳಿದ 4 ಸಭೆಗಳು ಕಾಸರಗೋಡು ಐಸಿಎಆರ್- ಸಿಪಿಸಿಆರ್‌ಐ ಕಚೇರಿಯಲ್ಲಿ ನಡೆದಿತ್ತು.
16ಕ್ಕೆ ಶಿವಮೊಗ್ಗದಲ್ಲಿ ಸಭೆ
ಎಲೆಚುಕ್ಕೆ ರೋಗದ ಸ್ಥಿತಿಗತಿ, ನಿರ್ವಹಣೆ, ಅಂಕಿ ಅಂಶ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲು ಆ.16ರಂದು ಶಿವಮೊಗ್ಗ ನವಿಲೆ ಕೃಷಿ ವಿವಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ 7 ಜಿಲ್ಲೆಗಳ ತೋಟಗಾರಿಕಾ ಉಪನಿರ್ದೇಶಕರು, ಮ್ಯಾಮ್ಕೋಸ್, ಕ್ಯಾಂಪ್ಕೋ, ಶಿರಸಿ ಪಿಎಸ್‌ಎಸ್, ವಿವಿ ವಿಜ್ಞಾನಿಗಳು ಭಾಗವಹಿಸಲಿದ್ದಾರೆ.ಅಧ್ಯಯನ ಸಮಿತಿ ಏಳು ಜಿಲ್ಲೆಗಳ ಹಲವು ಪ್ರದೇಶದ ಎಲೆಚುಕ್ಕೆ ರೋಗ ವ್ಯಾಪಿಸಿದ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಈಗಾಗಲೇ 5 ಬಾರಿ ಸಮಿತಿ ಸಭೆ ನಡೆಸಿದ್ದು ಹಲವು ನಿರ್ಣಯ ಕೈಗೊಳ್ಳಲಾಗಿದೆ. ಎಲೆಚುಕ್ಕೆ ರೋಗದ ತೀವ್ರತೆ, ತುರ್ತು ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.ಡಾ. ವಿನಾಯಕ ಹೆಗಡೆ, ಸಿಪಿಸಿಆರ್‌ಐ ಕಾಸರಗೋಡು ವಿಜ್ಞಾನಿ, ಅಧ್ಯಯನ ಸಮಿತಿ ಕಾರ್ಯದರ್ಶಿ