ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕೇಂದ್ರ ಆರಂಭ: ಡಾ.ಬಿ.ಸಿ.ಸತೀಶ

21adarshkdga7
Published on

ಮಡಿಕೇರಿ: ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ನಗರದ ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಮತ್ತು ವಿರಾಜಪೇಟೆಯ ವಿಧಾನಸಭಾ ಚುನಾವಣಾಧಿಕಾರಿರವರ ಕಚೇರಿಯಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ. ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗುವವರೆಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ಜತೆಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ೫೪೨ ಮತಗಟ್ಟೆ ವ್ಯಾಪ್ತಿಯಲ್ಲಿಯೂ ಸಹ ಜಾಗೃತಿ ಮೂಡಿಸಲಾಗುತ್ತದೆ. ವಿದ್ಯುನ್ಮಾನ ಮತಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.


ಭಾರತ ಚುನಾವಣಾ ಆಯೋಗದಿಂದ ಕೊಡಗು ಜಿಲ್ಲೆಗೆ ತೆಲಂಗಾಣ ರಾಜ್ಯದ ಹೈದ್ರಾಬಾದ್‌ನ ಭಾರತೀಯ ವಿದ್ಯುನ್ಮಾನ ನಿಗಮದಿಂದ ವಿವಿಎಂ ಮತ್ತು ವಿವಿಪ್ಯಾಟ್ ಪೂರೈಕೆಯಾಗಿದೆ. ಇದರಲ್ಲಿ ಬ್ಯಾಲೆಟ್ ಯುನಿಟ್ ೧೦೧೩, ಕಂಟ್ರೋಲ್ ಯುನಿಟ್ ೭೧೧ ಮತ್ತು ವಿವಿ ಪ್ಯಾಟ್ ೭೬೮ ಪೂರೈಕೆಯಾಗಿದೆ ಎಂದು ಮಾಹಿತಿ ನೀಡಿದರು.


ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನಾ ಕಾರ್ಯವನ್ನು ಭಾರತೀಯ ವಿದ್ಯುನ್ಮಾನ ನಿಗಮದ ಎಂಜಿನಿಯರ್‌ಗಳು ನಡೆಸಿ ಒಂದು ಬ್ಯಾಲೆಟ್ ಯುನಿಟ್ ಮಾತ್ರ ತಿರಸ್ಕೃತಗೊಂಡಿತ್ತು. ಈ ಸಂಬಂಧ ಫೆಬ್ರವರಿ ಮೊದಲ ವಾರದಲ್ಲಿ ವಿದ್ಯುನ್ಮಾನ ಮತಯಂತ್ರದ ಮೊದಲ ಹಂತದ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿತ್ತು. ಅದರಂತೆ ೧೦೧೧ ಬ್ಯಾಲೆಟ್ ಯೂನಿಟ್ ಸರಿಯಾಗಿದ್ದು, ಒಂದು ತಿರಸ್ಕೃತಗೊಂಡಿದೆ. ೭೦೪ ಕಂಟ್ರೋಲ್ ಯುನಿಟ್ ಸರಿಯಾಗಿದ್ದು, ೭ ತಿರಸ್ಕೃತಗೊಂಡಿದೆ. ಹಾಗೆಯೇ ೭೬೫ ವಿವಿ ಪ್ಯಾಟ್ ಸರಿಯಾಗಿದ್ದು, ೩ ತಿರಸ್ಕೃತಗೊಂಡಿದೆ. ತಿರಸ್ಕೃತಗೊಂಡ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್‌ನ್ನು ಹೈದ್ರಾಬಾದ್‌ನ ಭಾರತೀಯ ವಿದ್ಯುನ್ಮಾನ ನಿಗಮಕ್ಕೆ ಹಿಂತಿರುಗಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ಕೆ ಶೇ.೧೦ ರಷ್ಟು ವಿವಿಎಂ ಮತ್ತು ವಿವಿಪ್ಯಾಟ್‌ನ್ನು ಪಡೆಯಲಾಗಿದೆ ಎಂದು ಡಾ.ಬಿ.ಸಿ.ಸತೀಶ ಮಾಹಿತಿ ನೀಡಿದರು.


ರಾಜಕೀಯ ಪಕ್ಷಗಳ ಪ್ರಮುಖರಾದ ಕೆ.ಎಂ.ಅಪ್ಪಣ್ಣ(ಬಿಜೆಪಿ), ಸದಾ ಮುದ್ದಪ್ಪ(ಕಾಂಗ್ರೆಸ್), ರಮೇಶ್(ಸಿಪಿಐಎಂ), ಪತ್ರಕರ್ತರು ಹಾಗೂ ಇತರರ ಉಪಸ್ಥಿತಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆಗೆ ಚಾಲನೆ ದೊರೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಳ್ಳಾಲ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬಾನಾ ಎಂ.ಶೇಖ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net