

ಮೈಸೂರು: ಜಿಲ್ಲೆಯಲ್ಲಿ ಮತ್ತೊಂದು ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದಲ್ಲಿ ತಳವೂರುತ್ತಿರುವುದು ವಿಶೇಷ…!
ಜಿಲ್ಲೆಯಲ್ಲಿ 10 ಕೈಗಾರಿಕಾ ಪ್ರದೇಶಗಳಲ್ಲಿ 6 ಮೈಸೂರು ನಗರದ ಹೊರವಲಯದಲ್ಲಿವೆ. 3 ಕೈಗಾರಿಕಾ ಪ್ರದೇಶಗಳು ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಇದೀಗ ಇದಕ್ಕೆ ಕೊಚನಹಳ್ಳಿ ಕೈಗಾರಿಕಾ ಪ್ರದೇಶ ಹೊಸ ಸೇರ್ಪಡೆಯಾಗಿದೆ.
ಮೈಸೂರು ತಾಲೂಕಿನ ವರುಣ ಹೋಬಳಿಯ ಕೋಚನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮಾದರಿಯಲ್ಲಿ ಎಲೆಕ್ಟ್ರಾನಿಕ್ ಹಬ್ ಸ್ಥಾಪನೆಯಾಗಲಿದೆ. ಒಂದು ಸಾವಿರ ಕೋಟಿ ರೂ. ವರೆಗೆ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಅಂದಾಜು 5 ಸಾವಿರ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.
ಈ ಗ್ರಾಮದ 234.38 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಬಡಾವಣೆ ಸ್ಥಾಪನೆಯಾಗಲಿದ್ದು, ಎಲೆಕಟ್ರೆಾನಿಕ್, ಸೆಮಿ ಕಂಡಕ್ಟರ್, ಇಎಂಸಿ ಎಲೆಕಟ್ರೆಾನಿಕ್ಸ್ ಉತ್ಪನ್ನಗಳ ಉತ್ಪಾದನಾ ಘಟಕ ಮತ್ತು ಉದ್ಯಮಗಳಿಗೆ ಮಾತ್ರ ಮೀಸಲಾಗಿರಲಿದೆ.
234 ಎಕರೆ ಪ್ರದೇಶದಲ್ಲಿ 140 ಎಕರೆ ಪ್ರದೇಶವನ್ನು ಕೈಗಾರಿಕೆಗಳಿಗೆ ನಿವೇಶನ ಹಂಚಿಕೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸುಮಾರು 70ಕ್ಕೂ ಹೆಚ್ಚು ಉದ್ಯಮಿಗಳಿಗೆ ನೀಡಲು ಅರ್ಧ ಎಕರೆಯಿಂದ 10 ಎಕರೆವರೆಗೆ ವಿಶಾಲವಾದ ಕೈಗಾರಿಕಾ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಮೈಸೂರಿನ ಕೇನ್ಸ್ ಟೆಕ್ನಾಲಜಿಗೆ 20 ಎಕರೆ, ವರ್ಥ ಎಲೆಕಟ್ರೆಾನಿಕ್ಸ್‌ಗೆ ನಿವೇಶನ ನೀಡಲು ಅನುಮೋದನೆ ದೊರೆತಿದೆ.
ಇತ್ತೀಚೆಗೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು 800 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ ಅವರಿಗೆ ಅಗತ್ಯ ನಿವೇಶನ ನೀಡುವ ಮೂಲಕ ಮೈಸೂರಿನಲ್ಲಿ ಉದ್ದಿಮೆ ಸ್ಥಾಪನೆಯಾಗುವ ಸಂಬಂಧ ಕೆಐಎಡಿಬಿ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಈ ಉದ್ಯಮಿಯೂ ಸಹ ಬಂಡವಾಳ ಹೂಡಿಕೆ ಮಾಡಿದರೆ ಈ ಕೈಗಾರಿಕಾ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಪ್ರಮಾಣ 1800 ಕೋಟಿ ರೂ.ಗೆ ಏರಿಕೆಯಾಗಲಿದೆ.
ಕೋಚನಹಳ್ಳಿ ಕೈಗಾರಿಕಾ ಪ್ರದೇಶದ ಪ್ರಸ್ತಾಪಿತ ಯೋಜನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ವಿಮೋಚನಾ ಪತ್ರ ಪಡೆದುಕೊಳ್ಳಬೇಕಿದೆ. ಇದು ದೊರೆತ ಬಳಿಕ ನಿವೇಶನ ಹಂಚಿಕೆ ಮಾಡಲಾಗವುದು ಎನ್ನುತ್ತಾರೆ ಕೆಐಎಡಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಗೆ ಪ್ರತ್ಯೇಕವಾದ ಕೈಗಾರಿಕಾ ಪ್ರದೇಶ ನಿರ್ಮಾಣವಾಗುತ್ತಿದೆ. ಬೆಂಗಳೂರು ಬಳಿಕ ಮೈಸೂರಿನಲ್ಲಿಯೂ ಸಹ ಎಲೆಕ್ಟ್ರಾನಿಕ್ ಹಬ್ ತಲೆಯೆತ್ತಲಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯೊಂದಿಗೆ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ ದೊರೆಯಲಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದರು.