

ಕೋ.ಶಿವಾಪುರ: ಪಂಪ್‌ಸೆಟ್ ಹಾಗೂ ಮನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಗ್ರಾಮದಲ್ಲಿ ಹೆಸ್ಕಾಂ ಶಾಖಾಧಿಕಾರಿ ಆಶ್ೀ ನಧಾಪ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೃಷಿಕ ಸಮಾಜದ ಯುವ ಘಟಕದ ಅಧ್ಯಕ್ಷ ಮಹಾಂತೇಶ ತೋಟಗಿ ಮಾತನಾಡಿ, ಕೋಟೂರ ವಿದ್ಯುತ್ ಸರಬರಾಜು ಕೇಂದ್ರ ರೈತರ ಪಂಪ್‌ಸೆಟ್ ಹಾಗೂ ಮನೆಗಳಿಗೆ ವ್ಯವಸ್ಥಿತವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈಗಿರುವ 33 ಕೆವಿ ವಿದ್ಯುತ್ ಸರಬರಾಜು ಕೇಂದ್ರವನ್ನು 110 ಕೆವಿಗೆ ಹೆಚ್ಚಿಸಬೇಕು. ಪದೇಪದೆ ವಿದ್ಯುತ್ ವ್ಯತ್ಯಯದಿಂದ ಪಂಪ್‌ಸೆಟ್‌ಗಳಿಂದ ನೀರು ಸರಬರಾಜು ಆಗದೆ ರೈತರು ನಾಟಿ ಮಾಡಿದ ಬೆಳೆಗಳು ಒಣಗುತ್ತಿವೆ. ಹೀಗಾಗಿ, ಬೀಜೋಪಚಾರದ ಖರ್ಚು ಕೈ ಸೇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ರೈತರು ಗ್ರಾಮ ಪಂಚಾಯತಿ ಮುಂಭಾಗದ ವೃತ್ತದಲ್ಲಿ ಪ್ರತಿಭಟನೆ ನಡಸಿದರು.
ಸ್ಥಳಕ್ಕೆ ಆಗಮಿಸಿದ ಕೋಟೂರ ಹೆಸ್ಕಾಂ ಶಾಖಾಧಿಕಾರಿ ಆಶ್ೀ ನಧಾಪ್ ರೈತರ ಮನವಿ ಸ್ವೀಕರಿಸಿ, 110 ಕೆವಿ ಹೆಸ್ಕಾಂ ವಿದ್ಯುತ್ ಸರಬರಾಜು ಕೇಂದ್ರ ನಿರ್ಮಾಣ ಹಂತದಲ್ಲಿದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಮಡಿವಾಳಪ್ಪ ಗಡ್ಡಿ, ಶಿವು ಕಟ್ಟಿಮನಿ, ರಮೇಶ ಗಡ್ಡಿ, ಯಲ್ಲಪ್ಪ ಗೋಸಬಾಳ, ಸಂಗಪ್ಪ ಸೋಗಲದ, ರಾಯಪ್ಪ ಚಂದರಗಿ ಪರಮೇಶ ಚಂದರಗಿ ಇತರರಿದ್ದರು.