ವಿದ್ಯುತ್ ಅವಘಡದ ಎಚ್ಚರಿಕೆ ಇರಲಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

Electricity Supply Monitoring Meeting mandya
Published on

ಮಂಡ್ಯ: ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅವಘಢ ಸಂಭವಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಚೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿದ್ಯುತ್ ಪೂರೈಕೆ ಮೇಲ್ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರಸ್ತುತ ದಿನವಹಿ ವಿದ್ಯುತ್ ಬೇಡಿಕೆ 9.5 ಮಿಲಿಯನ್ ಯುನಿಟ್ ಇದೆ. ತಿಂಗಳಿಗೆ 300 ಮಿಲಿಯನ್ ಯುನಿಟ್ ಬೇಡಿಕೆ ಇರುತ್ತದೆ ಎಂದರು.

ಮೈಸೂರಿನ ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಶಂಕರ್ ಮಾತನಾಡಿ, ನಗರಕ್ಕೆ ನಿರಂತರ 24 ಗಂಟೆಗಳ 3 ಫೇಸ್ ವಿದ್ಯುತ್ ಸರಬರಾಜು, ಕೈಗಾರಿಕೆಗೆ ನಿರಂತರ 24 ಗಂಟೆಯ 3 ಫೇಸ್, ಗ್ರಾಮೀಣ ಭಾಗಕ್ಕೆ ಹಗಲಿನ ವೇಳೆ 4 ಗಂಟೆ, ರಾತ್ರಿ ವೇಳೆ 3 ಗಂಟೆ (3 ಫೇಸ್), 9ಗಂಟೆ (1 ಫೇಸ್), ಕಾಡಂಚಿನ ಭಾಗಕ್ಕೆ ಹಗಲಿನಲ್ಲಿ ನಿರಂತರ 7 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಪಾಂಡವಪುರದ ಮಹದೇಶ್ವರಪುರ, ಬನ್ನಂಗಾಡಿ, ನಾಗಮಂಗಲದ ಗೆಡ್ಡೇನಹಳ್ಳಿ, ಮಳವಳ್ಳಿಯ ವಡಕೆಪುರ, ಕೆ.ಆರ್.ಪೇಟೆಯ ಆನೆಗೊಳ, ಮಂಡ್ಯದ ಕೆಐಎಡಿಬಿ, ಶ್ರೀರಂಗಪಟ್ಟಣದ ತರಿಪುರ, ಮದ್ದೂರಿನ ಸೋಮನಹಳ್ಳಿಯಲ್ಲಿ ವಿದ್ಯುತ್ ಪರಿವರ್ತಕಗಳನ್ನು ಉನ್ನತೀಕರಣ ಮಾಡುವ ಬೃಹತ್ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಾಗಮಂಗಲದಲ್ಲಿ 11, ಮಂಡ್ಯದಲ್ಲಿ 10, ಶ್ರೀರಂಗಪಟ್ಟಣ 6, ಪಾಂಡವಪುರ 6, ಕೆ.ಆರ್.ಪೇಟೆ 12, ಮದ್ದೂರು 8, ಮಳವಳ್ಳಿ 10 ಸೇರಿದಂತೆ 53 ವಿದ್ಯುತ್ ಕೇಂದ್ರಗಳಿವೆ. ನಾಗಮಂಗಲ ತಾಲೂಕು ಅಂಚೆಚಿಟ್ಟನಹಳ್ಳಿ, ಬುಡಗುಂಟೆ, ಬಾಳನಕೊಪ್ಪಲಿ, ಮದ್ದೂರಿನ ತರಮನಕಟ್ಟೆ, ಮಂಡ್ಯ ತಾಲೂಕು ತಂಗಳಗೆರೆ/ಬಾಳೇನಹಳ್ಳಿ, ಹುಲಿವಾನ, ಸಂತೆಕಸಲಗೆರೆ, ಶ್ರೀರಂಗಪಟ್ಟಣದ ಕೊಡಿಯಾಲ, ಪಾಂಡವಪುರದ 220 ಕೆ.ವಿ ಪಾಂಡವಪುರ, ಕೆರೆತೊಣ್ಣೂರು, ಕ್ಯಾತನಹಳ್ಳಿಯಲ್ಲಿ ಹೊಸದಾಗಿ ವಿದ್ಯುತ್ ಉಪ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ವಿದ್ಯುತ್ ಸ್ಥಾವರ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳುವ ಮೊದಲು ಕಂದಾಯ ಇಲಾಖೆಯ ಅಭಿಪ್ರಾಯ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net