ವರ್ಷಧಾರೆಗೆ ಕುಸಿದ ವಿದ್ಯುತ್ ಬೇಡಿಕೆ *ಥರ್ಮಲ್ ಘಟಕಗಳಿಗೆ ವಿಶ್ರಾಂತಿ, ಕೆಪಿಸಿ ನಿರಾಳ * ಸದ್ಯ 1388 ಮೆವಾ ವಿದ್ಯುತ್ ಮಾತ್ರ ಉತ್ಪಾದನೆ

RTPS RICHUR
RTPS RICHUR
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ರಾಜ್ಯದ ಬಹುತೇಕ ಎಲ್ಲ ಕಡೆ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿದ್ಯುತ್ ಬೇಡಿಕೆ ಗಣನೀಯ ಕುಸಿತ ಕಂಡಿದೆ. ಪರಿಣಾಮ ರಾಜ್ಯದ ಥರ್ಮಲ್ ವಿದ್ಯುತ್ ಕೇಂದ್ರದ 8 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿ ವಿಶ್ರಾಂತಿ ನೀಡಲಾಗಿದೆ.

ಬಿರುಬೇಸಿಗೆಯ ಮಾರ್ಚ್‌ನಿಂದ ಮೇ ಎರಡನೇ ವಾರದ ವರೆಗೆ ರಾಜ್ಯದಲ್ಲಿ ದಾಖಲೆಯ ವಿದ್ಯುತ್ ಬೇಡಿಕೆ ಉಂಟಾಗಿ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೇಡಿಕೆ ಹಾಗೂ ಪೂರೈಕೆ ನಿಭಾಯಿಸಲು ಕೆಪಿಸಿ ಹೆಣಗಾಡಿತ್ತು. ಆದರೆ ಈಗ ಸುರಿಯುತ್ತಿರುವ ಮಳೆ ರೈತರಿಗಷ್ಟೇ ಅಲ್ಲ ಕೆಪಿಸಿಗೂ ವರದಾನವಾಗಿದೆ. ವಿದ್ಯುತ್ ಬೇಡಿಕೆ ತೀವ್ರ ಕುಸಿತ ಕಂಡಿದೆ.

ಭಾರೀ ಬೇಡಿಕೆ

ಪ್ರಸಕ್ತ ಬೇಸಿಗೆಯಲ್ಲಿ ರಾಜ್ಯದ ದೈನಂದಿನ ಬೇಡಿಕೆಯು 18ಸಾವಿರ ಮೆವಾ ವರೆಗೆ ತಲುಪಿ ಆತಂಕ ಮೂಡಿಸಿತ್ತು. ಜಲಾಶಯಗಳು ಬರಿದಾಗಿದ್ದರಿಂದ ಜಲವಿದ್ಯುತ್ ಘಟಕಗಳಲ್ಲಿ ಉತ್ತಾದನೆ ನಿಂತಿತ್ತು. ಥರ್ಮಲ್ ಘಟಕಗಳ ಮೇಲೆಯೇ ಒತ್ತಡ ಹೆಚ್ಚಾಗಿತ್ತು. ಉತ್ಪಾದನೆಯ ಒತ್ತಡದಿಂದಾಗಿ ಅನೇಕ ಸಲ ತಾಂತ್ರಿಕ ಸಮಸ್ಯೆಯಿಂದಾಗಿ ಘಟಕಗಳು ಉತ್ಪಾದನೆ ಸ್ಥಗಿತಗೊಳಿಸಿದ ಪ್ರಸಂಗಗಳು ನಡೆದಿದ್ದವು. ಕುಡಿಯುವ ನೀರು, ಕೃಷಿಗೂ ಥರ್ಮಲ್ ವಿದ್ಯುತ್ ಮೇಲೆ ನಿರ್ಭರ ಆಗುವಂತಾಗಿತ್ತು. ಪರಿಣಾಮ ಕೆಲ ವೇಳೆ ಅಘೋಷಿತ ಲೋಡ್ ಶೆಡ್ಡಿಂಗ್ ಅನುಭವಿಸುವಂತಾಗಿತ್ತು.

ವರ್ಷಧಾರೆ-

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಬಹುತೇಕ ಕಡೆ ಮೋಡ ಕವಿದ ವಾತಾವರಣವಿತ್ತು. ಆನಂತರದಲ್ಲಿ ಧಾರಾಕಾರ ಮಳೆಯಾಗ ತೊಡಗಿದ್ದರಿಂದ ವಿದ್ಯುತ್‌ಬಳಕೆ ಗಣನೀಯ ಕುಸಿದಿದೆ. ಬಿಸಿಲ ತಾಪವು ಮಳೆಯ ಕಾರಣಕ್ಕೆ ಇಳಿಕೆಯಾಗಿದೆ. ಸತತ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬಳಕೆ ತಗ್ಗಿದೆ.

ದೈನಂದಿನ ಬೇಡಿಕೆಯು 18000 ಮೆವಾ ನಿಂದ ಈಗ 8 ರಿಂದ 10 ಸಾವಿರ ಮೆವಾ ಗೆ ಇಳಿದಿದೆ. ಪರಿಣಾಮ ವಿದ್ಯುತ್ ಕಡಿತದ ಸಮಸ್ಯೆಯೂ ನಿವಾರಣೆಯಾಗಿದೆ ಅಷ್ಟೇ ಅಲ್ಲ ರಾಜ್ಯದಲ್ಲಿ ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದ್ದ ಶಕ್ತಿನಗರ ಹಾಗೂ ಯರಮರಸ್‌ನಲ್ಲಿ ಉತ್ಪಾದನೆ ತಗ್ಗಿಸಲಾಗಿದೆ.

ಘಟಕಗಳಿಗೆ ವಿಶ್ರಾಂತಿ

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕಡಿಮೆ ಆಗಿದ್ದರಿಂದ ಶಕ್ತಿನಗರದ ಆರ್‌ಟಿಪಿಎಸ್‌ನ ಎಂಟು ಘಟಕಗಳ ಪೈಕಿ ಕೇವಲ ಒಂದರಲ್ಲಿ ಉತ್ಪಾದನೆ ಜಾರಿಯಲ್ಲಿಡಲಾಗಿದೆ. ಅದೇ ರೀತಿ ಯರಮರಸ್‌ನ ವೈಟಿಪಿಎಸ್‌ನ ಎರಡು ಘಟಕಗಳ ಪೈಕಿ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಥರ್ಮಲ್ ಘಟಕಗಳಿಂದ ಸದ್ಯ ಒಟ್ಟು 1388 ಮೆವಾ ವಿದ್ಯುತ್ ಉತ್ಪಾದಿಸುತ್ತಿದ್ದು, ಬೇಸಿಗೆಯಲ್ಲಿ ಉಂಟಾಗಿದ್ದ ವಿದ್ಯುತ್ ಕೊರತೆಯ ಭೀತಿ ವರ್ಷಧಾರೆಯಿಂದ ಮರೆಯಾಗಿದೆ. ಕೃಷಿ ಹಾಗೂ ವಾಣಿಜ್ಯಿಕ ವಿದ್ಯುತ್ ಬಳಕೆಯೂ ಗಣನೀಯ ಕುಸಿತ ಕಂಡು ಕೆಪಿಸಿ ಗೆ ನೆಮ್ಮದಿ ಕರುಣಿಸಿದಂತಾಗಿದೆ.

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವುದರಿಂದ ವಿದ್ಯುತ್‌ಗೆ ಗಣನೀಯವಾಗಿ ಬೇಡಿಕೆ ತಗ್ಗಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಪ್ರಮಾಣ ಕಡಿಮೆ ಮಾಡಲಾಗಿದೆ.

ಜಯಪ್ರಕಾಶ ಇಡಿ ಆರ್‌ಟಿಪಿಎಸ್ ಶಕ್ತಿನಗರ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net