

ಆನೇಕಲ್ : ಸರ್ವೋಚ್ಛ ನ್ಯಾಯಾಲಯದ ಆದೇಶ ಧಿಕ್ಕರಿಸಿ ಹಸಿರು ವಲಯ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದನ್ನು ಖಂಡಿಸಿ ಶುಕ್ರವಾರ ಜಿಗಣಿ ಬೆಸ್ಕಾಂ ಕಚೇರಿ ಎದುರು ಪ್ರಜಾ ವಿಮೋಚನಾ ಚಳವಳಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಸಂಘಟನೆ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ ಮಾತನಾಡಿ, ಕಾನೂನುಬಾಹಿರವಾಗಿ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಜಿಗಣಿ ಬೆಸ್ಕಾಂ ಅಧಿಕಾರಿಗಳು ಮನವಿಗೆ ಕವಡೆಕಾಸಿನ ಕಿಮ್ಮತ್ತೂ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಜಿಗಣಿ ಹೋಬಳಿಯ ಹುಲಿಮಂಗಲ, ಸಕಲವಾರ, ಬೇಗಿಹಳ್ಳಿ, ಎಸ್.ಬಿಂಗಿಪುರ, ಹುಲ್ಲಹಳ್ಳಿ, ನಂಜಾಪುರ ಗ್ರಾಮಗಳ ಜಮೀನುಗಳು ಹಸಿರು ವಲಯ ವ್ಯಾಪ್ತಿಯಲ್ಲಿವೆ. ಅನೇಕ ಬಲಾಢ್ಯ ಬಿಲ್ಡರ್‌ಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಾನೂನು ಬಾಹಿರವಾಗಿ ಇಲ್ಲಿ ಬಡಾವಣೆ ನಿರ್ಮಿಸಿ ನಿವೇಶನ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ ಎಂದು ದೂರಿದರು.
ಹುಲಿಮಂಗಲ ಸರ್ವೇ ನಂಬರ್ 155 ಮತ್ತು 156 ರಲ್ಲಿ ಸುಮಾರು 300 ಎಕರೆ ಸರ್ಕಾರಿ ಜಮೀನಾಗಿದ್ದು, ಎಸ್ಸಿ, ಎಸ್‌ಟಿ ಇತರ ಅನೇಕರಿಗೆ ಈ ಭೂಮಿಯಲ್ಲಿ ನಿವೇಶನ ಮಂಜೂರಾಗಿವೆ. ಉಳಿದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮಾರಾಟ ಮಾಡುತ್ತಿದ್ದರೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಿ ಭೂಮಿ ವಶಕ್ಕೆ ಪಡೆಯದೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ ಎಂದು ಆಪಾದಿಸಿದರು.
ಹಸಿರು ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಮನೆ ನಿರ್ಮಿಸುವುದು ಹಾಗೂ ವಿದ್ಯುತ್ ಸಂಪರ್ಕ ನೀಡುವುದು ಪುನಃ ಮುಂದುವರಿದರೆ ಚಳವಳಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.