ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಅಬಾಧಿತ

Vijayavani-logo
Published on

ಬೆಂಗಳೂರು: ಭವಿಷ್ಯದಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಲಿರುವ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳಲ್ಲಿ ಸಾರ್ವಜನಿಕರು ನಿರ್ಮಿಸುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಪತ್ರ ಬರೆದಿದ್ದ ಬಿಡಿಎ ನಿಲುವನ್ನು ಬೆಂಬಲಿಸದೆ, ಯಾರೇ ಅರ್ಜಿ ಹಾಕಿದರೂ ಅಂತಹವರಿಗೆ ಹಿಂದಿನಂತೆಯೇ ಪವರ್ ಸಪ್ಲೈ ಮಾಡಲು ಬೆಸ್ಕಾಂ ನಿರ್ಧರಿಸಿದೆ.

‘ವಿಜಯವಾಣಿ’ ತನ್ನ ಮಾ.21ರ ಸಂಚಿಕೆಯಲ್ಲಿ ‘ಬೆಸ್ಕಾಂ ಕಾರ‌್ಯದಲ್ಲಿ ಬಿಡಿಎ ಹಸ್ತಕ್ಷೇಪ’ ಶಿರ್ಷಿಕೆಯಡಿ ವಿಶೇಷ ಲೇಖನ ಪ್ರಕಟಿಸಿ ಸಾರ್ವಜನಿಕರಿಗೆ ಉಂಟಾಗುತ್ತಿದ್ದ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದಿತ್ತು. ಜತೆಗೆ ಭೂಸ್ವಾಧೀನ ಅಧಿಸೂಚನೆ ಹೊರಡಿಸದೆಯೇ ಭವಿಷ್ಯದಲ್ಲಿ ಬಡಾವಣೆ ರಚಿಸುವ ಕಾರಣಕ್ಕೆ ಅಂತಹ ಪ್ರದೇಶಗಳಲ್ಲಿ ಮನೆ ನಿರ್ಮಿಸುವವರಿಗೆ ವಿದ್ಯುತ್ ಸಂಪರ್ಕ ನೀಡದಂತೆ ಬಿಡಿಎ ಆಯುಕ್ತರು ಬೆಸ್ಕಾಂ ಎಂಡಿಗೆ ಪತ್ರ ಬರೆದು ಅಧಿಕಾರದ ಲಕ್ಷ್ಮಣ ರೇಖೆ ದಾಟಿದ್ದಾರೆಂದು ವರದಿ ಮಾಡಿತ್ತು. ಇದಾಗಿ ಕೆಲ ದಿನಗಳವರೆಗೆ ಬೆಂಗಳೂರು ಉತ್ತರ ತಾಲುಕು ವ್ಯಾಪ್ತಿಯಲ್ಲಿ ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತಾತ್ಕಾಲಿಕ ತಡೆಬಿದ್ದಿತ್ತು. ಇದೀಗ ಬೆಸ್ಕಾಂ ಕೇಂದ್ರ ಕಚೇರಿಯಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸಂದೇಶ ರವಾನಿಸಿ ಹಾಲಿ ಅನುಸರಿಸುತ್ತಿರುವ ನಿಯಮದಂತೆ ಅರ್ಜಿ ವಿಲೇವಾರಿ ಮಾಡುವಂತೆ ಸೂಚನೆ ನೀಡಿದೆ.

ಮೌಖಿಕ ಸೂಚನೆಗೆ ನಾಗರಿಕರ ಆಕ್ಷೇಪ:

ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಹಾದುಹೋಗುವ ಮಾರ್ಗದ ಸುತ್ತಮುತ್ತ ಹೊಸದಾಗಿ ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಿರುವ ಕಾರಣ ಆ ವ್ಯಾಪ್ತಿಯಲ್ಲಿರುವ ರೆವಿನ್ಯೂ ಲೇಔಟ್‌ಗಳಲ್ಲಿ ಮನೆಗಳನ್ನು ನಿರ್ಮಿಸುವವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಬಿಡಿಎ ಆಯುಕ್ತ ಕಳೆದ ಫೆ.28ರಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಇದನ್ನಾಧರಿಸಿ ಕೆಲ ದಿನಗಳ ಮಟ್ಟಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಬೆಸ್ಕಾಂ ಉನ್ನತಾಧಿಕಾರಿಗಳು ಆಯಾ ಉಪ ವಿಭಾಗದ ಇಂಜಿನಿಯರ್‌ಗಳಿಗೆ ಮೌಖಿಕ ಸೂಚನೆ ನೀಡಿದ್ದರು. ಈ ನಡೆಯ ವಿರುದ್ಧ ರೈತ ಮುಖಂಡರು ಹಾಗೂ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಎಂದೋ ನಿರ್ಮಿಸಲಿರುವ ಬಡಾವಣೆಗೆ ಭೂಸ್ವಾಧೀನ ಅಧಿಸೂಚನೆ ಹೊರಡಿಸದಿರುವಾಗ ವಿದ್ಯುತ್ ಸಂಪರ್ಕ ನಿಬಂಧಿಸುವ ಅಧಿಕಾರ ಬಿಡಿಎಗೆ ಇಲ್ಲ. ಹೀಗಾಗಿ ಬಿಡಿಎ ಪತ್ರವನ್ನು ಮಾನ್ಯ ಮಾಡದೆ ಅರ್ಜಿ ಹಾಕಿದವರಿಗೆ ನಿಯಮಾನುಸಾರ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಲಾಗಿತ್ತು.

ವಿದ್ಯುತ್ ಸಂಪರ್ಕಕ್ಕೆ ಗ್ರೀನ್ ಸಿಗ್ನಲ್:

ಕಳೆದ ವಾರ ಕೆಲ ನಾಗರಿಕರು ಸೋಲದೇವನಹಳ್ಳಿ ಉಪ ವಿಭಾಗದ ಕುಂಬಾರಹಳ್ಳಿಯಲ್ಲಿ ಹೊಸ ಮನೆಗೆ ವಿದ್ಯುತ್ ಸಂಪರ್ಕ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲಿಸಿದ ಇಂಜಿನಿಯರ್‌ಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಳಿಕ ಸೌಲಭ್ಯ ಕಲ್ಪಿಸುವುದಾಗಿ ಅರ್ಜಿದಾರರಿಗೆ ಹಿಂಬರಹ ನೀಡಿದ್ದರು. ಇದೀಗ ಸಂಸ್ಥೆಯು ಪಾಲಿಸಿಕೊಂಡು ಬಂದಿರುವ ನಿಯಮದಂತೆ ಮುಂದುವರಿಯಲು ಆಯಾ ಉಪ ವಿಭಾಗಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ ಸಾರ್ವಜನಿಕರು ನಿಟ್ಟಿಸಿರು ಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಮ ಕಾರಂತ ಬಡಾವಣೆ ಭಾಗದ ರೈತ ಮುಖಂಡ ರಮೇಶ್ ರಾಮಗೊಂಡನಹಳ್ಳಿ, ನಾಗರಿಕರು ನಿರ್ಮಿಸುವ ಮನೆಗಳಿಗೆ ಪವರ್ ಸಪ್ಲೈ ಮಾಡದಂತೆ ಬಿಡಿಎ ಆಯುಕ್ತರು ಬೆಸ್ಕಾಂಗೆ ನಿರ್ದೇಶಿಸುವ ಅಧಿಕಾರ ಇಲ್ಲ. ಆದರೂ ಇಂಥದ್ದೊಂದು ಪತ್ರ ಬರೆದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಪ್ರಾಧಿಕಾರದ ಆಯುಕ್ತರಿಗೆ ತಮ್ಮ ತಪ್ಪಿನ ಅರಿವಾದಂತಿದೆ. ಬೆಸ್ಕಾಂ ಕೂಡ ತನ್ನ ಆಡಳಿತದಲ್ಲಿ ಅನ್ಯ ಸಂಸ್ಥೆ ಆಡಳಿತದಲ್ಲಿ ಮೂಗು ತೂರಿಸುವುದಕ್ಕೆ ಅವಕಾಶ ನೀಡದೆ ಎಂದಿನಂತೆ ವಿದ್ಯುತ್ ಸಂಪರ್ಕ ಒದಗಿಸಲು ಮುಂದಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net