61.57ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ

Published on

ಕುಮಟಾ: ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಪಂಚಾಯಿತಿಗಳು ಹಾಗೂ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಲಕ್ಷಾಂತರ ರೂ. ವಿದ್ಯುತ್ ಬಿಲ್ ಕುರಿತ ಚರ್ಚೆ ಗಮನ ಸೆಳೆಯಿತು.

ವಿದ್ಯುತ್ ಬಿಲ್ ಬಾಕಿಗೆ ಸಂಬಂಧಿಸಿ ಅಳಲು ತೋಡಿಕೊಂಡ ಹೆಸ್ಕಾಂ ಅಧಿಕಾರಿ, ಗ್ರಾಪಂಗಳಿಂದ ಹಣ ಸಂದಾಯವಾಗುತ್ತಿಲ್ಲವಾದ್ದರಿಂದ ಸಮಸ್ಯೆಯಾಗಿದೆ. ಅತಿಹೆಚ್ಚು ಎಂದರೆ ಮಿರ್ಜಾನ ಪಂಚಾಯಿತಿ 20 ಲಕ್ಷ ರೂ., ಹೆಗಡೆ 21 ಲಕ್ಷ ರೂ. ಬಾಕಿ ಇದೆ. ಒಟ್ಟು 61,57,830 ರೂ. ಬಾಕಿ ಬರಬೇಕಾಗಿದೆ. ಅಲ್ಲದೆ, ಕಂದಾಯ ಇಲಾಖೆಯ 13 ಲಕ್ಷ ರೂ. ಬಾಕಿ ಇದೆ. ಈಗ ಕರೆಂಟ್‌ಕಟ್ ಮಾಡಬೇಕಾಗಿದೆ. ಹೆಸ್ಕಾಂನಿಂದ ತಾಲೂಕಿನಲ್ಲಿ 41,630 ಜನರಿಗೆ ಗೃಹಜ್ಯೋತಿ ಯೋಜನೆ ನೀಡಲಾಗಿದೆ. ಪಿ.ಎಂ. ಸೂರ್ಯಘರ್ 72 ನೋಂದಣಿಯಾಗಿದೆ ಎಂದರು.

ಎಲ್ಲ ಪಂಚಾಯಿತಿ, ಸರ್ಕಾರಿ ಕಚೇರಿಗಳಲ್ಲಿ ಸೂರ್ಯಘರ್ ಅಡಿ ಸೋಲಾರ್ ಅಳವಡಿಕೆಯಾಗಬೇಕು ಎಂದು ಆಡಳಿತಾಧಿಕಾರಿ ಜಯಂತ ಸೂಚಿಸಿದರು.

ಆರೋಗ್ಯ ಇಲಾಖೆ ಪ್ರಗತಿ ಆಲಿಸಿದ ಜಯಂತ, ತಾಲೂಕಿನಲ್ಲಿ ಕ್ಷಯ ರೋಗ ಸಂಪೂರ್ಣ ಮುಕ್ತ ಆಗಿರುವ ಬಗ್ಗೆ ಗ್ರಾಮವಾರು ಬ್ಲೂಪ್ರಿಂಟ್ ದಾಖಲಿಸಬೇಕು. ಅರಣ್ಯ ಗ್ರಾಮ ಮೇದಿನಿಗೆ ಆರೋಗ್ಯ ಇಲಾಖೆಯಿಂದ ಪ್ರತಿ 15 ದಿನಗಳಿಗೊಮ್ಮೆ ಹೋಗಿ ಚಿಕಿತ್ಸೆ ನೀಡಬೇಕು ಎಂದರು.

ತಾಲೂಕಾಸ್ಪತ್ರೆ ಕುರಿತ ಚರ್ಚೆಯಲ್ಲಿ ಕರೊನಾ ಕಾಲಘಟ್ಟದಲ್ಲಿ ಪೂರೈಕೆಯಾಗಿದ್ದ ವೆಂಟಿಲೇಟರ್‌ಗಳು, ವೈದ್ಯಕೀಯ ಉಪಕರಣಗಳನ್ನು ಸುಸ್ಥಿತಿಯಲ್ಲಿರಬೇಕು. ಕೂಡಲೇ ದುರಸ್ತಿ ಕೈಗೊಂಡು ವರದಿ ನೀಡಬೇಕು ಎಂದು ಇಒ ತಿಳಿಸಿದರು.

ಮೇದಿನಿ ಶಾಲೆಗೆ ತಲುಪಿಸುವ ಅಕ್ಷರ ದಾಸೋಹದ ವಸ್ತುಗಳನ್ನು ಸೊಪ್ಪಿನಹೊಸಳ್ಳಿ ಪ್ರಾಥಮಿಕ ಶಾಲೆಗೆ ತಲುಪಿಸುತ್ತಿದ್ದು ಅಲ್ಲಿಂದ ಎಸ್‌ಡಿಎಂಸಿಯವರೇ ಸಾಗಿಸುತ್ತಿದ್ದಾರೆ. ಇದಕ್ಕಾಗಿ ಅವರಿಗೆ 700-800 ರೂ. ನೀಡಲಾಗುತ್ತಿದೆ ಎಂದು ಅಕ್ಷರದಾಸೋಹ ಅಧಿಕಾರಿ ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ಅಧಿಕಾರಿ ಮಾತನಾಡಿ, ಬೀಡಾಡಿ ದನಗಳ ನಿಯಂತ್ರಣ ಕಷ್ಟಸಾಧ್ಯವಾಗಿದೆ. ಹಾಗೆಯೇ ಪಶುಸಖಿಯರು ಮನೆಮನೆಗೆ ತೆರಳಿ ಜಾನುವಾರುಗಳ ಮಾಹಿತಿ ಪಡೆದು, ಆನ್‌ಲೈನ್‌ನಲ್ಲಿ ದಾಖಲಿಸುತ್ತಿದ್ದಾರೆ. ಹಿಂದಿನ ವರ್ಷ 600 ಪ್ಯಾಕೆಟ್ ಮೇವಿನ ಬೀಜ ಬಂದಿದ್ದು, ರೈತರಿಗೆ ಸಾಕಾಗುತ್ತಿಲ್ಲ ಎಂದರು.

ಕೃಷಿ ಇಲಾಖೆಯ ಸರದಿಯಲ್ಲಿ ಹಿಂಗಾರು ಭತ್ತದ ಬೀಜ 40 ಕ್ವಿಂಟಾಲ್ ಬಂದಿದ್ದು, 10 ಕ್ವಿಂಟಾಲ್ ವಿತರಿಸಲಾಗಿದೆ. ಹಿಂಗಾರು 570 ಎಕರೆ ಗುರಿ ಇದೆ. ಕೂಜಳ್ಳಿ, ಗೋಕರ್ಣ ಭಾಗದಲ್ಲಿ ಶೇಂಗಾ ಬೆಳೆ ಚೆನ್ನಾಗಿ ಬರುತ್ತದೆ. 110 ಎಕರೆ ಮುಂಗಾರಲ್ಲಿ ಭತ್ತ ನಾಶ ಆಗಿದ್ದು ಗುಂಟೆಗೆ 85 ರೂ. ಗಳಂತೆ ಪರಿಹಾರ ಬಂದಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ಚೇತನ್, 2024ರಲ್ಲಿ 50 ಜೇನು ಪೆಟ್ಟಿಗೆ ನೀಡಲಾಗಿದೆ ಎಂದರು. ಪ್ರತಿಕ್ರಿಯಿಸಿದ ಇಒ, ಜೇನು ಉತ್ಪಾದನೆ ಬಳಿಕ ಮಾರ್ಕೆಟಿಂಗ್ ಲಿಂಕ್ ನೀಡಿ, ಒಂದು ಬ್ರ್ಯಾಂಡ್ ಮಾಡಿ ಮಾರ್ಕೆಟ್ ಮಾಡಲು ಇಲಾಖೆಯಿಂದ ಸಹಕಾರ ನೀಡಬೇಕು. ಸಹಕಾರಿ ಸಂಘ ಮಾಡಿಕೊಂಡು ಜೇನು ಉತ್ಪಾದನೆ ಹೆಚ್ಚಿಸಿ ಮಾರ್ಕೆಟಿಂಗ್ ಮಾಡಲು ಏನು ಮಾಡಬಹುದು ಎಂದು ಸಮಗ್ರ ಯೋಜನೆ ವರದಿ ನೀಡುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net