

ಮಡಿಕೇರಿ:
10 ಹೆಚ್.ಪಿ. ಒಳಗಿನ ಕೃಷಿ ಪಂಪ್‌ಸೆಟ್‌ಗೆ ಬಳಕೆ ಆಗುವ ವಿದ್ಯುತ್‌ಗೆ ಕೊಡಗಿನಲ್ಲಿ ಕಾಫಿ ಬೆಳೆಗಾರರು ಶುಲ್ಕ ಕಟ್ಟಬೇಕಿದೆ. ಈ ಮಧ್ಯೆ ಟ್ರಾನ್ಸ್ಫಾರ್ಮರ್ ಅಳವಡಿಕೆ ವೆಚ್ಚವೂ ರೈತರ ಹೆಗಲಿಗೆ ಬಿದ್ದಿದೆ. ಬರದಿಂದ ಮೊದಲೇ ಕಂಗಾಲಾಗಿರುವ ಅನ್ನದಾತರಿಗೆ ಇದರಿಂದ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ರೈತರ ಪಂಪ್ ಸೆಟ್‌ಗಳಿಗೆ ಟ್ರಾನ್ಸ್ಫಾರ್ಮರ್ ಸೇರಿದಂತೆ ಮೂಲ ಸೌಲಭ್ಯ ಒದಗಿಸುವ ಯೋಜನೆಯನ್ನು ಸರ್ಕಾರ ರದ್ದು ಮಾಡಿದೆ. ತಮ್ಮ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಬೇಕು ಎಂದಾದರೆ ರೈತರೇ ಸ್ವತಃ ಖರ್ಚು ಬರಿಸಬೇಕು ಎಂದು ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ಡಿ.ಎಂ. ವಿನೋದ್ ಕುಮಾರ ಅ. 7 ರಂದು ಆದೇಶ ಹೊರಡಿಸಿದ್ದಾರೆ.
2023ರ ಸೆ.22ರ ನಂತರ ನೋಂದಣಿ ಆಗುವ ನೀರಾವರಿ ಪಂಪ್ ಸೆಟ್‌ಗಳಿಗೆ ರೈತರು ತಮ್ಮ ಸ್ವಂತ ಖರ್ಚಿನಲ್ಲೇ ಮೂಲ ಸೌಲಭ್ಯ ಪಡೆಯಬೇಕು ಎಂದು ಈ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಸರ್ಕಾರದ ಈ ಆದೇಶದ ಪ್ರಕಾರ ರೈತರು ತಮ್ಮ ನೀರಾವರಿ ಪಂಪ್ ಸೆಟ್‌ಗೆ ವಿದ್ಯುತ್ ಪಡೆಯಲು ಲಕ್ಷಾಂತರ ರೂ. ಹಣ ಖರ್ಚು ಮಾಡಬೇಕಿದೆ.
ಕಳೆದ 10 ವರ್ಷದಿಂದ ಅಕ್ರಮ – ಸಕ್ರಮ ಯೋಜನೆ ಜಾರಿಯಲ್ಲಿತ್ತು. ಪಂಪ್‌ಸೆಟ್ ಮೂಲಕ ನೀರಾವರಿ ಮಾಡುವ ರೈತರಿಗೆ ಇಂಧನ ಇಲಾಖೆಯ ಈ ಯೋಜನೆ ವರ ಆಗಿತ್ತು. ರೈತರು ಸುಮಾರು 20 ಸಾವಿರ ರೂ. ಶುಲ್ಕ ಪಾವತಿಸಿ ನೀರಾವರಿ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಪಡೆಯಲು ಪರವಾನಗಿ ಪಡೆಯಬಹುದಿತ್ತು. ವಿದ್ಯುತ್ ಕಂಪನಿಗಳೇ ಆ ರೈತನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು.
ಈಗ ಸರ್ಕಾರದ ಹೊಸ ಆದೇಶದಿಂದ ವಿದ್ಯುತ್ ಜಾಲ ಎಷ್ಟೇ ದೂರವಿದ್ದರೂ ರೈತನ ಸ್ವಂತ ಹಣದಲ್ಲೇ ವಿದ್ಯುತ್ ಕಂಬ ಮತ್ತು ತಂತಿ ಹಾಕಿಸಿಕೊಳ್ಳಬೇಕಿದೆ. ಇಷ್ಟು ಮಾತ್ರವಲ್ಲ ಟ್ರಾನ್ಸ್ಫಾರ್ಮರ್‌ಗಾಗಿ ಲಕ್ಷಾಂತರ ರೂ. ವೆಚ್ಚ ಮಾಡಬೇಕು. ಮೊದಲು ರೈತರು ನೋಂದಣಿ ಶುಲ್ಕವಾಗಿ 20 ಸಾವಿರ ರೂ. ಪಾವತಿಸಲು ಕೂಡ ಸಂಕಷ್ಟಪಡುತ್ತಿದ್ದರು. ಈಗ ಸರ್ಕಾರದ ಹೊಸ ನೀತಿಯಿಂದ ರೈತರು ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಪಡೆಯಲು ಲಕ್ಷಾಂತರ ರೂ.ಖರ್ಚು ಮಾಡುವ ಅನಿವಾರ್ಯತೆಯಲ್ಲಿದ್ದಾರೆ. ಮೊದಲೇ ಬರದಿಂದ ಕಂಗೆಟ್ಟಿರುವ ರೈತರಿಗೆ ಸರ್ಕಾರದ ಈ ಆದೇಶ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊAಡ ಅಭಿಪ್ರಾಯಗಳು ಇಲ್ಲಿದೆ.
ಕೃಷಿಕರೇ ದೇಶದ ಮೂಲ ಆಧಾರವಾಗಿದ್ದಾರೆ. ಇತರರಿಗೆ ನೀಡುವ ಸೌಲಭ್ಯಕ್ಕಿಂತಲೂ, ಕೃಷಿಕರಿಗೆ ಬೇಕಾದ ಮೂಲಭೂತ ಸೌಲಭ್ಯಗಳಿಗೆ ಸರ್ಕಾರ ಮೊದಲ ಆದ್ಯತೆ ಕೊಡಬೇಕು. ರೈತರು ಏಳಿಗೆ ಆದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ವಿದ್ಯುತ್ ಸಂಪರ್ಕಕ್ಕೆ ಸಂಬAಧಿಸಿದAತೆ ಸರ್ಕಾರ ಈಗ ಮಾಡಿರುವ ಆದೇಶ ಸರಿಯಲ್ಲ. ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಬೇಕು.
ಕೆ.ಡಿ. ರಾಮಯ್ಯ, ಕಾಫಿ ಬೆಳೆಗಾರ, ಸುಂಟಿಕೊಪ್ಪ
ಕೊಡಗಿನಲ್ಲಿ ಕೃಷಿ ಪಂಪ್‌ಸೆಟ್‌ಗೆ ಬಳಕೆ ಆಗುವ ವಿದ್ಯುತ್‌ಗೆ ಕಾಫಿ ಬೆಳೆಗಾರರು ಶುಲ್ಕ ಕಟ್ಟಬೇಕೆನ್ನುವುದು ದೊಡ್ಡ ದುರಂತ. ಈ ಮಧ್ಯೆ ಟ್ರಾನ್ಸ್ಫಾರ್ಮರ್ ಅಳವಡಿಕೆ ವೆಚ್ಚವೂ ರೈತರ ಹೆಗಲಿಗೆ ಬಿದ್ದಿರುವುದು ಸಾಮಾನ್ಯ ರೈತರಿಗೆ ಆರ್ಥಿಕವಾಗಿ ಹೊಡೆತ ನೀಡಿದಂತೆ ಆಗಿದೆ. ಸರ್ಕಾರ ಕೂಡಲೇ ಇಂತಹ ರೈತ ವಿರೋಧಿ ಆದೇಶಗಳನ್ನು ವಾಪಸ್ ಪಡೆಯಬೇಕು. ಬರದಿಂದ ಕಂಗೆಟ್ಟಿರುವ ರೈತನ ಬೆಂಬಲಕ್ಕೆ ನಿಲ್ಲಬೇಕು.
ಎಂ.ಎನ್. ಮೂರ್ತಿ, ರೈತ, ಮಣಜೂರು.
ವಿದ್ಯುತ್ ಉಚಿತ ಎಂದು sಸರ್ಕಾರ ರೈತರಿಂದ ಸುಲಿಗೆ ಮಾಡುತ್ತಿದೆ. ಮೊದಲೇ ಕಾಫಿ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕಾಫಿ ಬೆಳೆೆಗಾರರು ಸಂಕಷ್ಟದಲ್ಲಿದ್ದೇವೆ. ನಮ್ಮ ಸಂಕಷ್ಟ ಸರ್ಕಾರಕ್ಕೆ ತಿಳಿಯುತ್ತಿಲ್ಲ. ಟ್ರಾನ್ಸ್ಫಾರ್ಮರ್ ಅಳವಡಿಕೆ ವೆಚ್ಚ ರೈತರ ಹೆಗಲಿಗೆ ಹಾಕಿರುವುದು ಸರಿಯಲ್ಲ. ಅನ್ನದಾತರಿಗೆ ಅನ್ಯಾಯ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ.
ಎಸ್. ಎನ್. ರಘು. ಕಾಫಿ ಬೆಳೆಗಾರ, ಶನಿವಾರಸಂತೆ.
ಇಂದಿನ ದಿನಗಳಲ್ಲಿ ರೈತರಿಗೆ ಕೃಷಿಯಲ್ಲಿ ಬಹಳಷ್ಟು ಕಷ್ಟ ನಷ್ಟಗಳು ಇದೆ. ಅಂತಹ ಸಂದರ್ಭದಲ್ಲಿ ಸÀರ್ಕಾರ ರೈತರ ಪರ ನಿಲ್ಲಬೇಕು. ಆದರೆ 10 ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ನೀಡದೇ ಇರುವುದು ದೊಡ್ದ ಹೊಡೆತ. ಇದರ ಜೊತೆಯಲ್ಲಿಯೇ ಇದೀಗ ಟ್ರಾನ್ಸ್ಫಾರ್ಮರ್ ಗೂ ರೈತರೇ ಹಣ ಭರಿಸಬೇಕೆಂಬುದು ನಿಜಕ್ಕೂ ರೈತರಿಗೆ ದೊಡ್ಡ ಹೊರೆಯೇ ಆಗಿದೆ. ಆದಷ್ಟು ಬೇಗ ಇದರ ಬಗ್ಗೆ ಮತ್ತೆ ಪರಿಶೀಲಿಸಿದರೆ ಒಳ್ಳೆಯದು.
ಕಟ್ಟೇರ ವಿಶ್ವನಾಥ್ ಗಣೇಶ್, ರೈತ, ಟಿ. ಶೆಟ್ಟಿಗೇರಿ
10 ಹೆಚ್.ಪಿ ಉಚಿತ ವಿದ್ಯುತ್ ಹಂಚಿಕೆಯಲ್ಲಿ ನಿಜಕ್ಕೂ ಜಿಲ್ಲೆಗೆ ಅನ್ಯಾಯವಾಗಿದೆ. ಬೇರೆ ಜಿಲ್ಲೆಗಳಲ್ಲಿ ನೀಡುವಂತೆ ನಮ್ಮ ರೈತರಿಗೂ ಉಚಿತ ವಿದ್ಯುತ್ ನೀಡಬೇಕು. ನಾವು ಮೊದಲಿನಿಂದಲೂ ಈ ಬಗ್ಗೆ ಹೋರಾಟ ನಡೆಸುತ್ತಲೇ ಇದ್ದೇವೆ. ಈಗ ಹೊಸದಾಗಿ ಟ್ರಾನ್ಸ್ಫಾರ್ಮರ್ ಅಳವಡಿಕೆ ಹೊರೆ ರೈತರಿಗೇ ನೀಡಿರುವುದು ಸರಿಯಲ್ಲ. ನಾವು ಇದನ್ನು ಖಂಡಿಸುತ್ತೇವೆ. ಕೂಡಲೇ ಸರಿಪಡಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.
ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ
ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಬರಗಾಲ, ಅಕಾಲಿಕ ಮಳೆಯಿಂದ ಫಸಲು ಹಾನಿಯಾಗುತ್ತಿದೆ. ರೈತರಿಗೆ ಕಾಫಿ, ಕಾಳುಮೆಣಸು, ಸೇರಿದಂತೆ ಆಹಾರ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಕೊಡಗಿನಲ್ಲಿ ಪಂಪ್‌ಸೆಟ್‌ಗಳ ಮೂಲಕ ನೀರು ಹಾಯಿಸಿ ಬೆಳೆಗಳನ್ನು ಬೆಳೆಯಬೇಕು. ಟ್ರಾನ್ಸ್ಫಾರ್ಮರ್ ಅಳವಡಿಕೆ ವೆಚ್ಚ, ಅವೈಜ್ಞಾನಿಕ ವಿದ್ಯುತ್ ಶುಲ್ಕ, ಬಿಲ್ ಮೇಲಿನ ಚಕ್ರಬಡ್ಡಿಯಿಂದ ಅನ್ನದಾತ ಸೋತು ಹೋಗಿದ್ದಾನೆ.
ರಾಜೇಶ್ ಲಿಂಗೇರಿ, ಜಿಲ್ಲಾಧ್ಯಕ್ಷ, ರೈತಹೋರಾಟ ಸಮಿತಿ.
ಕೊಡಗಿನಲ್ಲಿ ಕಾಫಿ ಬೆಳೆಯುವ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ, ಇನ್ನಿತರ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸದಿದ್ದರೆ, ಕಾಫಿ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗುತ್ತದೆ. ವಿದ್ಯುತ್ ಇಲಾಖೆಯವರು ಎಲ್ಲದಕ್ಕೂ ಶುಲ್ಕ ವಿಧಿಸುತ್ತ ಹೋದರೆ ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಬೇಕಾಗುತ್ತದೆ. ರೈತಪರ ಯೋಜನೆಗಳನ್ನು ತರಬೇಕು. ಅಕಾಲಿಕ ಮಳೆ, ಬರದಿಂದ ಈಗಾಗಲೇ ಕಾಫಿ ಬೆಳೆಗಾರರು ಫಸಲು ನಷ್ಟವನ್ನು ಅನುಭವಿಸಿದ್ದಾರೆ. ಕಾಫಿ ವಿದೇಶಿ ವಿನಿಮಯ, ತೆರಿಗೆಯಿಂದ ಸಾವಿರಾರು ಕೋಟಿ ಆದಾಯ ಸರ್ಕಾರದ ಬೊಕ್ಕಸ ಸೇರುತ್ತಿದೆ. ಸೌಲಭ್ಯಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ.
ಅಶ್ವಿನಿ ಕೃಷ್ಣಕಾಂತ್, ಕಾಫಿ ಬೆಳೆಗಾರರು, ಸಿಂಗನಳ್ಳಿ ಗ್ರಾಮ
ಈಗಾಗಲೇ ರೈತರು ಬರದಿಂದ ಕಂಗೆಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ಬೆನ್ನಿಗೆ ನಿಲ್ಲಬೇಕಿತ್ತು. ಅದರ ಬದಲು ಎಲ್ಲಾ ಕಡೆಯಿಂದಲೂ ಅನ್ನದಾತರನ್ನು ಶೋಷಣೆ ಮಾಡಲಾಗುತ್ತಿದೆ. ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎಲ್ಲಾ ವೆಚ್ಚ ರೈತರಿಂದಲೇ ವಸೂಲಿ ಮಾಡುವ ನಿರ್ಧಾರ ಜನಪರ ಸರ್ಕಾರಕ್ಕೆ ಶೋಭೆಯಲ್ಲ. ಕೂಡಲೇ ನಿರ್ಧಾರ ಬದಲಿಸಲಿ.
ಹೇಮಂತ್ ಪಾರೇರ, ಯುವ ರೈತ, ಯಡವನಾಡು ಗ್ರಾಮ
ಸರ್ಕಾರಗಳು ಯಾವಾಗಲೂ ಜನಪರವಾಗಿರಬೇಕು. ಅದರಲ್ಲೂ ದೇಶಕ್ಕೆ ಅನ್ನ ಕೊಡುವ ರೈತರಿಗೆ ಅನುಕೂಲ ಆಗುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಕೊಡಗಿನ ರೈತರು ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ನಿಂದ ವಂಚಿತರಾಗಿದ್ದಾರೆ. ಈಗ ಹೊಸದಾಗಿ ಪಂಪ್‌ಸೆಟ್ ಸಂಪರ್ಕ ಪಡೆಯಲು ಎಲ್ಲಾ ವೆಚ್ಚಗಳನ್ನು ರೈತರೇ ಭರಿಸಬೇಕಿದೆ. ಈ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು.
ಸಿರಕಜೆ ಲೋಕಪ್ರಕಾಶ್, ರೈತ, ಭಾಗಮಂಡಲ
ರೈತರ ಜಮೀನು ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಎಲ್ಲಾ ವೆಚ್ಚಗಳು ರೈತರೇ ಭರಿಸಬೇಕು ಎನ್ನುವ ಆದೇಶ ಒಂದೂವರೆ ತಿಂಗಳು ಹಿಂದೆಯೇ ಬಂದಿದೆ. ಈ ಆದೇಶ ವಾಪಸ್ ತೆಗೆದುಕೊಳ್ಳಲಾಗಿದೆ ಎನ್ನುವ ಬಗ್ಗೆ ಹಲವರು ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ನಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಹಾಗಾಗಿ ಹೊಸದಾಗಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕಕ್ಕೆ ಟ್ರಾನ್ಸ್‌ಫಾರ್ಮರ್ ವೆಚ್ಚ ಸೇರಿ ತಗಲುವ ಎಲ್ಲಾ ಖರ್ಚು ರೈತರೇ ಭರಿಸಬೇಕಿದೆ.
ಅನಿತಾ ಬಾಯಿ, ಕಾರ್ಯನಿರ್ವಾಹಕ ಅಭಿಯಂತರರು, ಸೆಸ್ಕ್, ಮಡಿಕೇರಿ