

ಮಂಡ್ಯ: ನಗರದ ನೂರಡಿ ರಸ್ತೆಯಲ್ಲಿ ಸೋಮವಾರ ರಾತ್ರಿ ವಿದ್ಯುತ್‌ಅವಘಡ ಸಂಭವಿಸಿ ಎಲೆಕ್ಟ್ರಿಕಲ್ ಅಂಗಡಿ ಹೊತ್ತಿ ಉರಿದು ಸಂಪೂರ್ಣವಾಗಿ ಭಸ್ಮವಾಗಿದೆ.
ಸಪ್ತಗಿರಿ ಎಲೆಕ್ಟ್ರಿಕಲ್ ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ. ಅವಘಡದಲ್ಲಿ ವಯರ್ ಬಂಡಲ್, ಸ್ವಿಚ್ ಬೋರ್ಡ್, ಪೈಪ್‌ಗಳು, ಗೀಸರ್, ಬಲ್ಪ್ಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಾದರಿಯ ಎಲೆಕ್ಟ್ರಿಕಲ್ ವಸ್ತುಗಳು ಸುಟ್ಟು ಹೋಗಿದ್ದು, ಎಲ್ಲ ವಸ್ತುಗಳು ಪ್ಲಾಸ್ಟಿಕ್ ಆಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಸೋಮವಾರ ಎಂದಿನಂತೆ ವ್ಯಾಪಾರ ಮಾಡಿ ರಾತ್ರಿ 8.45ರ ಸಮಯದಲ್ಲಿ ಅಂಗಡಿ ಬಾಗಿಲು ಮುಚ್ಚಿದ್ದು, ಅನಂತರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ 11.15ರ ಸಮಯದಲ್ಲಿ ಸಾರ್ವಜನಿಕರು ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಮಾಲೀಕ ಪ್ರಕಾಶ್ ಮತ್ತು ಪೃಥ್ವಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರಾದರೂ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿ ಇದ್ದರಿಂದಾಗಿ ಬೆಂಕಿ ಹೆಚ್ಚಾಗಿತ್ತು. ಬಳಿಕ ಹೆಚ್ಚಿನ ಅಗ್ನಿಶಾಮಕ ವಾಹನಗಳನ್ನು ಕರೆಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಲಾಯಿತು. ಆದರೆ ಅಷ್ಟರೊಳಗೆ ಅಂಗಡಿಯಲ್ಲಿದ್ದ ಎಲೆಕ್ಟ್ರಿಕಲ್ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು.