ಟೆಂಡರ್‌ ಕಾರ್ಯಾದೇಶಕ್ಕೆ ಎಲೆಕ್ಟ್ರಿಕಲ್ ಇಪಿಸಿ ಗುತ್ತಿಗೆದಾರರ ಸಂಘ ಒತ್ತಾಯ

Published on

ಮೈಸೂರು: ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸಲು ಕರೆದಿರುವ ಟೆಂಡರ್‌ಗಳಿಗೆ ಕೂಡಲೇ ಕಾರ್ಯಾದೇಶ ನೀಡಬೇಕು. 2020-21ನೇ ಸಾಲಿನ ವಿಸ್ತೃತ ಕಾರ್ಯಾದೇಶ ಪೂರ್ಣಗೊಂಡ ಕಾಮಗಾರಿಗಳ ಬಿಲ್ ಮೊತ್ತ ಪಾವತಿಸಬೇಕು ಎಂದು ಎಲೆಕ್ಟ್ರಿಕಲ್ ಇಪಿಸಿ ಗುತ್ತಿಗೆದಾರರ ಸಂಘದ ಸದಸ್ಯ ಮಂಜುನಾಥ್ ಸರ್ಕಾರವನ್ನು ಒತ್ತಾಯಿಸಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಲ್ಲಿ 2022-23ನೇ ಆರ್ಥಿಕ ವರ್ಷದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಒಪ್ಪಿಗೆ ಪಡೆದು 237 ಕೋಟಿ ರೂ. ಟೆಂಡರ್ ಆಹ್ವಾನಿಸಲಾಗಿದೆ. ಅಲ್ಲದೆ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕನಿಷ್ಠ ಮೊತ್ತಕ್ಕೆ ಬಿಡ್ ಮಾಡಿರುವ ಗುತ್ತಿಗೆದಾರರನ್ನು ಆಹ್ವಾನಿಸಿ ದರ ಸಂಧಾನ ನಡೆಸಿ, ಬ್ಯಾಂಕ್ ಖಾತ್ರಿ ಪತ್ರ ಪಡೆದು, ಕಾಮಗಾರಿ ನಡೆಸಲು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ನಡುವೆ, ಗುತ್ತಿಗೆದಾರರು ಕಾಮಗಾರಿಗಳನ್ನು ಪ್ರಾರಂಭಿಸಲು ಅವಶ್ಯವಿರುವ ಸಾಮಗ್ರಿಗಳನ್ನು ಟೆಂಡರ್ ನಿಯಮಗಳಂತೆ ಇಲಾಖಾ ಅಧಿಕಾರಿಗಳು ತಪಾಸಣೆ ನಡೆಸಿ ರವಾನೆ ಆದೇಶ ನೀಡಿದ್ದಾರೆ. ಜತೆಗೆ, 2023-24ನೇ ಸಾಲಿನ ಬಜೆಟ್‌ನಲ್ಲಿ ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳ ಮೂಲಸೌಕರ್ಯ ಕಲ್ಪಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಒಪ್ಪಿಗೆ ನೀಡಿದೆ. ಹೀಗಿದ್ದರೂ ಈವರೆಗೆ ಕೆಲಸ ಪಾರಂಭಿಸಲು ಕಾರ್ಯಾದೇಶ ನೀಡಿಲ್ಲ ಎಂದು ದೂರಿದರು.
ಈ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಶ್ನಿಸಿದರೆ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಬೇಡಿ. ಸಾಮಗ್ರಿಗಳನ್ನು ನಾವೇ ಖರೀದಿಸಿ ಲೇಬರ್ ಅವಾರ್ಡ್ ಮಾಡೋಣ. ಯಾವುದೇ ಬಿಲ್‌ಗಳನ್ನು ಪಾಸ್ ಮಾಡಬೇಡಿ ಎಂದು ಸರ್ಕಾರದಿಂದ ಮೌಖಿಕ ಆದೇಶವಿರುವುದಾಗಿ ತಿಳಿಸುತ್ತಿದ್ದಾರೆ ಎಂದು ಹೇಳಿದರು.
ಗುತ್ತಿಗೆದಾರರು ಸಾಮಗ್ರಿಗಳಿಗಾಗಿ ಈಗಾಗಲೇ ನೂರಾರು ಕೋಟಿ ರೂ.ಗಳನ್ನು ಬ್ಯಾಂಕು ಮತ್ತು ಇತರ ಸಂಸ್ಥೆಗಳಿಂದ ಸಾಲ ಪಡೆದಿದ್ದು ಮರುಪಾವತಿ ಮಾಡಲು ಸಾಧ್ಯವಾಗದೆ ಸುಸ್ತಿದಾರರಾಗಿದ್ದಾರೆ. ಅಡಮಾನ ಮಾಡಿರುವ ಆಸ್ತಿಗಳು ಹರಾಜಾಗುವ ಭೀತಿ ಎದುರಿಸುವಂತಾಗಿದೆ. ಆದ್ದರಿಂದ ಕೂಡಲೇ ಕಾರ್ಯಾದೇಶ ನೀಡಬೇಕು ಮತ್ತು ಹಳೆಯ ಬಿಲ್ ಪಾವತಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸಂಘದ ಮುಖಂಡರಾದ ಟಿ.ಎಸ್.ಮಂಜುನಾಥ್, ಪುಟ್ಟಮಾದು, ಕೆಂಪರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net