

ಕಾಸರಗೋಡು: ಎಣ್ಮಕಜೆ ಪಂಚಾಯಿತಿಯ ಪೆರ್ಲ ಸಬ್‌ಸ್ಟೇಶನ್ ವ್ಯಾಪ್ತಿಯ ಬಜಕೂಡ್ಲು ಪ್ರದೇಶದಲ್ಲಿ ವಿದ್ಯುತ್ ತಂತಿ ಜೋತಾಡುವ ಸ್ಥಿತಿಯಲ್ಲಿದ್ದು, ಸ್ಥಳೀಯ ನಿವಾಸಿಗಳಿಗೆ ನಿತ್ಯ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯುತ್ ಕಂಬವೊಂದನ್ನು ಕೆಳಪ್ರದೇಶದಲ್ಲಿ ಅಳವಡಿಸಿದ್ದರೆ, ಮುಂದಿನ ಕಂಬವನ್ನು ಎತ್ತರದ ಪ್ರದೇಶದಿಂದ ಮುಂದಕ್ಕೆ ಇಳಿಜಾರಲ್ಲಿ ಅಳವಡಿಸಿರುವುದರಿಂದ ಮಧ್ಯೆ ತಂತಿ ಜೋತಾಡುವ ಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳ ಹಿಂದೆ ಈ ವಿದ್ಯುತ್ ಕಂಬ ಅಳವಡಿಸಲಾಗಿದ್ದು, ಕಾಲಕ್ರಮೇಣ ವಿದ್ಯುತ್ ತಂತಿ ಮತ್ತಷ್ಟು ಜೋತಾಡಲಾರಂಭಿಸಿದೆ. ಈ ಪ್ರದೇಶದಲ್ಲಿ ಹಲವು ಮನೆಗಳಿದ್ದು, ಇಲ್ಲಿನ ನಿವಾಸಿಗಳು ಇದೇ ವಿದ್ಯುತ್ ತಂತಿಯಡಿಯಿಂದ ನಡೆದು ಸಾಗಬೇಕು. ಉದ್ದನೆಯ ವಸ್ತುಗಳನ್ನು ಹೊತ್ತು ಸಾಗುವ ಮಧ್ಯೆ ವಿದ್ಯುತ್ ತಂತಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಕೃಷಿ ಚಟುವಟಿಕೆಗಳಿಗಾಗಿ ದೋಟಿ, ಏಣಿ ಕೊಂಡೊಯ್ಯುವ ಮಧ್ಯೆ ತಂತಿಗೆ ಸಿಲುಕಿ ದುರ್ಘಟನೆಗೆ ಕಾರಣವಾಗುವ ಸಾಧ್ಯತೆಯೇ ಹೆಚ್ಚು. ಮಕ್ಕಳು ಆಟವಾಡುತ್ತಾ ಉದ್ದನೆಯ ದೋಟಿಗಳನ್ನು ತಂತಿಗೆ ಸ್ಪರ್ಶಿಸುವ ಸಾಧ್ಯತೆಯಿದ್ದು, ಒಟ್ಟಿನಲ್ಲಿ ಅಪಾಯ ಆಹ್ವಾನಿಸುವ ರೀತಿಯಲ್ಲಿ ವಿದ್ಯುತ್ ತಂತಿ ಜೋತಾಡುತ್ತಿದೆ. ವಿದ್ಯುತ್ ತಂತಿ ತಕ್ಷಣ ಸರಿಪಡಿಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
ವಿದ್ಯುತ್ ತಂತಿ ಅಪಾಯಕರ ರೀತಿಯಲ್ಲಿ ಜೋತಾಡುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಲಿಖಿತ ದೂರನ್ನು ಕಚೇರಿಗೆ ಸಲ್ಲಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಚೇರಿ ಗಮನಕ್ಕೆ ಬಾರದ ರೀತಿಯಲ್ಲಿ ಕೆಲವೊಂದು ಕಡೆ ವಿದ್ಯುತ್ ತಂತಿ, ವಿದ್ಯುತ್ ಕಂಬಗಳಿದ್ದಲ್ಲಿ ಸ್ಥಳೀಯ ನಾಗರಿಕರು ಈ ಬಗ್ಗೆ ಸನಿಹದ ಕಚೇರಿಗೆ ಮಾಹಿತಿ ನೀಡುವ ಮೂಲಕ ಅಪಾಯ ನಿವಾರಿಸಲು ಸಾಧ್ಯ. ರಾಜಗೋಪಾಲ್, ಸಹಾಯಕ ಇಂಜಿನಿಯರ್, ಕೆಎಸ್‌ಇಬಿ, ಪೆರ್ಲ ವಿಭಾಗ
ರಾಜಗೋಪಾಲ್, ಸಹಾಯಕ ಇಂಜಿನಿಯರ್, ಕೆಎಸ್‌ಇಬಿ, ಪೆರ್ಲ ವಿಭಾಗ