

| ಆನಂದ ಅಂಗಡಿ ಹುಬ್ಬಳ್ಳಿ
ಬೆಂಗಳೂರು - ಹುಬ್ಬಳ್ಳಿ ಮಧ್ಯದ ಮೊದಲ ಇಲೆಕ್ಟ್ರಿಕ್ ರೈಲು ಡಿಸೆಂಬರ್ನಲ್ಲಿ ಸಂಚರಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಗುಂತಕಲ್ - ಧರ್ವವರಂ ಮಾರ್ಗ ಮೂಲಕ ಸಂಚರಿಸುವ ಹಂಪಿ ಎಕ್ಸ್ಪ್ರೆಸ್ ರೈಲು ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ಇಲೆಕ್ಟ್ರಿಕ್ (ವಿದ್ಯುತ್ ಚಾಲಿತ) ಇಂಜಿನ್ನೊಂದಿಗೆ ನವೆಂಬರ್ ಅಂತ್ಯಕ್ಕೆ ಅಥವಾ ಡಿಸೆಂಬರ್ ಆರಂಭದಲ್ಲಿ ಸಂಚಾರ ಶುರು ಮಾಡಲಿದೆ ಎಂದು ನೈಋತ್ಯ ರೈಲ್ವೆ ವಲಯದ ಮೂಲಗಳು ತಿಳಿಸಿವೆ.
ಬೆಂಗಳೂರಿನಿಂದ ಹೊಸಪೇಟೆವರೆಗೆ ಹಂಪಿ ಎಕ್ಸ್ಪ್ರೆಸ್ ರೈಲಿನ ಇಲೆಕ್ಟ್ರಿಕ್ ಇಂಜಿನ್ ಈಗಾಗಲೇ ಸಂಚರಿಸುತ್ತಿದೆ. ಹೊಸಪೇಟೆಯಲ್ಲಿ ಈ ರೈಲಿನ ಇಲೆಕ್ಟ್ರಿಕ್ ಇಂಜಿನ್ ಅನ್ನು ಬದಲಾಯಿಸಿ, ಡೀಸೆಲ್ ಇಂಜಿನ್ ಜೋಡಿಸಲಾಗುತ್ತಿದೆ. ಅಲ್ಲಿಂದ ಹುಬ್ಬಳ್ಳಿಯವರೆಗೆ ಈ ರೈಲು ಡೀಸೆಲ್ ಇಂಜಿನ್ನೊಂದಿಗೆ ಬಂದು ಸೇರುತ್ತದೆ.
ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ರೈಲು ಮಾರ್ಗವನ್ನು ಸಂಪೂರ್ಣ ವಿದ್ಯುದ್ದೀಕರಣಗೊಳಿಸುವ ಕಾಮಗಾರಿ 2023ರ ಡಿಸೆಂಬರ್ವೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದುವರೆಗೆ ಹುಬ್ಬಳ್ಳಿ ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಬಳ್ಳಾರಿಯಿಂದ ಹುಲಕೋಟಿವರೆಗಿನ ಅಂದಾಜು 132 ಕಿಮೀ ಉದ್ದದ ಮಾರ್ಗ ವಿದ್ಯುದ್ದೀಕರಣಗೊಂಡಿದೆ. ಹೊಸಪೇಟೆಯಿಂದ ಹುಲಕೋಟಿವರೆಗೆ ಇಲೆಕ್ಟ್ರಿಕ್ ಲೋಕೊಮೋಟಿವ್ ಅನ್ನು ಪರೀಕ್ಷಿಸಲಾಗಿದೆ. ನವೆಂಬರ್ ಅಂತ್ಯದೊಳಗೆ ಹುಲಕೋಟಿಯಿಂದ ಹುಬ್ಬಳ್ಳಿ ರೈಲು ನಿಲ್ದಾಣದವರೆಗಿನ ಮಾರ್ಗವನ್ನು ಸಂಪೂರ್ಣ ವಿದ್ಯುದ್ದೀಕರಣಗೊಳಿಸುವ ಗುರಿಯನ್ನು ಹುಬ್ಬಳ್ಳಿ ರೈಲ್ವೆ ವಿಭಾಗ ಹೊಂದಿದೆ.
ವಾಸ್ಕೊ - ತಿನೈಘಾಟ್: ಮತ್ತೊಂದೆಡೆ ಹುಬ್ಬಳ್ಳಿ ವಿಭಾಗದ ಗೋವಾದಲ್ಲಿರುವ ವಾಸ್ಕೊ - ತಿನೈಘಾಟ್ ಮಾರ್ಗದ ವಿದ್ಯುದ್ದೀಕರಣವನ್ನು ಸಹ 2023ರ ಮಾರ್ಚ್ನಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಮಗಾರಿ ಚುರುಕುಗೊಂಡಿದೆ. ಈಗಾಗಲೇ ವಾಸ್ಕೊ - ತಿನೈಘಾಟ್ ಮಧ್ಯೆ ಪ್ರಾಥಮಿಕ ಹಂತದ ಸರ್ವೆ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಧಾರವಾಡ- ಅಳ್ನಾವರ ಮಧ್ಯೆ ರೈಲು ಮಾರ್ಗ ವಿದ್ಯುದ್ದೀಕರಣಗೊಳಿಸುವ ಕಾಮಗಾರಿ ಪೂರ್ಣಗೊಂಡಿದೆ. ಲೋಂಡಾದಿಂದ ತಿನೈಘಾಟ್ವರೆಗಿನ ಮಾರ್ಗದ ವಿದ್ಯುದ್ದೀಕರಣ ಆಗಬೇಕಿದೆ.
3 ಸಂಸ್ಥೆಗಳಿಂದ ಕಾಮಗಾರಿ: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ರೈಲು ಮಾರ್ಗ ಡಬ್ಲಿಲಿಂಗ್ ಹಾಗೂ ವಿದ್ಯುದ್ದೀಕರಣ ಕಾಮಗಾರಿ ಯನ್ನು ಪವರ್ ಗ್ರಿಡ್ ನಿಗಮ, ರೈಲ್ ವಿಕಾಸ ನಿಗಮ ಹಾಗೂ ಸೆಂಟ್ರಲ್ ಆರ್ಗನೈಸೇಶನ್ ಫಾರ್ ರೈಲ್ವೆ ಎಲೆಕ್ಟ್ರಿಫಿಕೇಶನ್ ಸಂಸ್ಥೆಗಳು ಮಾಡುತ್ತಿವೆ. ಮೂರೂ ಸಂಸ್ಥೆಗಳಿಗೆ ವಲಯ ವ್ಯಾಪ್ತಿಯ ಬೇರೆ ಬೇರೆ ಕಡೆಯ ಕಾಮಗಾರಿಯನ್ನು ವಹಿಸಲಾಗಿದೆ.
2023ರ ಡಿಸೆಂಬರ್ ಒಳಗೆ ಹುಬ್ಬಳ್ಳಿ ರೈಲ್ವೆ ವಿಭಾಗ ವ್ಯಾಪ್ತಿಯ ಎಲ್ಲ ಮಾರ್ಗವನ್ನು ಡಬ್ಲಿಂಗ್ ಜತೆಗೆ ವಿದ್ಯುದ್ದೀಕರಣಗೊಳಿಸುವ ಗುರಿ ಇದೆ. ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. | ಅನಿಶ ಹೆಗಡೆ ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಹುಬ್ಬಳ್ಳಿ)
ಗದಗನಿಂದ ಸೊಲ್ಲಾಪುರ ಮಾರ್ಗದ ಬಾಗಲಕೋಟೆ - ವಿಜಯಪುರ ಮಾರ್ಗದ ಹೋಟಗಿ (ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಅಂತಿಮ ನಿಲ್ದಾಣ)ಯಿಂದ ಕಲಗುರ್ಕಿವರೆಗಿನ ಮಾರ್ಗ ಸಹ ಈಗಾಗಲೇ ವಿದ್ಯುದ್ದೀಕರಣಗೊಂಡಿದೆ. ಇಲೆಕ್ಟ್ರಿಕ್ ಇಂಜಿನ್ ಸಂಚಾರವನ್ನೂ ಪರೀಕ್ಷಿಸಲಾಗಿದೆ. ಕಲಗುರ್ಕಿಯಿಂದ ವಿಜಯಪುರವರೆಗೆ ರೈಲು ಮಾರ್ಗದ ಡಬಲಿಂಗ್ ಕಾಮಗಾರಿಯ ಜತೆಗೆ ಈ ಮಾರ್ಗದ ವಿದ್ಯುದ್ದೀಕರಣ ಕೆಲಸವೂ ನಡೆಯಲಿದೆ. ಕಲಗುರ್ಕಿಯಿಂದ ಗದಗ ವರೆಗೆ ಡಬಲಿಂಗ್ ಕಾಮಗಾರಿ ನಡೆಯಲಿದ್ದು, ಅದರೊಂದಿಗೆ ಮಾರ್ಗ ದ್ಯುದ್ದೀಕರಣವೂ ನಡೆಯಲಿದೆ. ಲೋಂಡಾ- ಮಿರಜ್ ಮಧ್ಯೆಯೂ ಡಬಲಿಂಗ್ ಕಾಮಗಾರಿ ಜತೆಗೆ ಈ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿದೆ.
ಹುಬ್ಬಳ್ಳಿ- ಹಾವೇರಿ (ಮೈಸೂರು ವಿಭಾಗ) ಮಧ್ಯೆ ಡಬಲಿಂಗ್ ಕಾಮಗಾರಿ ನಡೆಯುತ್ತಿದೆ. ಈ ವರ್ಷ ಹಾವೇರಿ- ಸಂಶಿ ಮಧ್ಯೆ ಡಬಲಿಂಗ್ ಕೆಲಸ ಪೂರ್ಣ ಗೊಳ್ಳಲಿದೆ ಎಂದು ನೈಋತ್ಯ ರೈಲ್ವೆಯ ಮೂಲಗಳು ತಿಳಿಸಿವೆ. ಹಾವೇರಿಯಿಂದ ದೇವರಗುಡ್ಡದವರೆಗೆ ಹಾಗೂ ದೇವರಗುಡ್ಡ- ರಾಣೆಬೆನ್ನೂರ- ಹರಿಹರ- ದಾವಣಗೆರೆ ಮಾರ್ಗ ಡಬಲಿಂಗ್ ಆಗಬೇಕಿದೆ. ಈಗಾಗಲೇ ತೋಳಹುಣಸಿ- ಮಾಯಕೊಂಡ- ಚಿಕ್ಕ ಜಾಜೂರು- ಅರಸೀಕೆರೆವರೆಗಿನ ರೈಲು ಮಾರ್ಗ ಡಬಲಿಂಗ್ ಆಗಿದೆ. ಅರಸೀ ಕೆರೆಯಿಂದ ತುಮಕೂರು ಕಡೆಯ ಮಾರ್ಗವೂ ಡಬಲಿಂಗ್ ಆಗಿದೆ. ಅರಸಿಕೆರೆಯಿಮದ ಹಾಸನವರೆಗೆ ಸಿಂಗಲ್ ಮಾರ್ಗ ಇದ್ದು, ಡಬಲಿಂಗ್ ಜತೆಗೆ ವಿದ್ಯುದ್ದೀಕರಣವೂ ಆಗಬೇಕಿದೆ.ಹುಬ್ಬಳ್ಳಿ- ಚಿಕ್ಕಜಾಜೂರ ಮಧ್ಯದ 195 ಕಿಮೀ ಮಾರ್ಗದಲ್ಲಿ 95 ಕಿಮೀನಷ್ಟು ಮಾರ್ಗ ವಿದ್ಯುದ್ದೀಕರಣಗೊಂಡಿದೆ. ಹಾವೇರಿ-ಸಂಶಿ ಮಧ್ಯದ ಮಾರ್ಗದ ಡಬಲಿಂಗ್ ಹಾಗೂ ವಿದ್ಯುದ್ದೀಕರಣ ಕಾಮಗಾರಿ ಬರುವ ಫೆಬ್ರುವರಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.