

ಪಾಂಡವಪುರ: ತಾಲೂಕಿನ ಹಿರೇಮರಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಮೂರು ಎಕರೆಯಲ್ಲಿ ಬೆಳೆದಿದ್ದ ಕಬ್ಬು ನಾಶವಾಗಿದೆ.
ಗ್ರಾಮದ ನಿಂಗೇಗೌಡ ಎಂಬುವರಿಗೆ ಸೇರಿದ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಕಬ್ಬು ಬೆಳೆದಿದ್ದ ಜಮೀನಿನ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದು, ತಡರಾತ್ರಿಯಲ್ಲಿ ತಂತಿ ತುಂಡಾಗಿ ಕೆಳಗೆ ಬಿದ್ದು ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವ ಪರಿಣಾಮ ಮೂರು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದೆ. ತಡರಾತ್ರಿಯಾದ ಕಾರಣ ಜಮೀನಿನಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅಗ್ನಿಶಾಮಕ ಅಥವಾ ಇನ್ನಿತರ ಕ್ರಮಗಳಿಂದ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಬೆಳಗಿನ ಜಾವ ನೀರು ಹಾಯಿಸಲು ಜಮೀನಿಗೆ ತೆರಳಿದ್ದ ವೇಳೆ ಅವಘಡ ಗೊತ್ತಾಗಿದೆ.
ಈ ಹಿಂದೆಯೂ ಕೂಡ ಜಮೀನಿಗೆ ಬೆಂಕಿ ಬಿದ್ದು ಕಬ್ಬು ಬೆಳೆ ನಾಶವಾಗಿತ್ತು. ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತೆರವುಗೊಳಿಸಲು ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೂ ಅಧಿಕಾರಿಗಳು ತಂತಿ ತೆರವಿಗೆ ಕ್ರಮ ಕೈಗೊಳ್ಳದ ಕಾರಣ ಅಪಾರ ನಷ್ಟ ಸಂಭವಿಸಿದೆ. ಹಿಂದಿನ ನಷ್ಟಕ್ಕೂ ಅಧಿಕಾರಿಗಳು ಪರಿಹಾರ ನೀಡಿಲ್ಲ. ಈಗ ಮತ್ತೊಮ್ಮೆ ಬೆಂಕಿ ತಗುಲಿ ಕಬ್ಬು ನಾಶವಾಗಿ ನಮ್ಮ ಬದುಕು ಬೀದಿಗೆ ಬಿದ್ದಿದೆ’’ ಎಂದು ರೈತ ನಿಂಗೇಗೌಡ ಅಳಲು ತೋಡಿಕೊಂಡರು.