

ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮದಿಂದ ವಡಗೆರೆ ಗ್ರಾಮದ ಮಾರ್ಗವಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ವಾಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯು ಕಿರಿದಾಗಿದ್ದು, ಇಲ್ಲಿ ಒಂದು ವಾಹನ ಬಂದರೆ ಮತ್ತೊಂದು ವಾಹನ ಸಂಚಾರ ಮಾಡಬೇಕಾದರೆ ಚಾಲಕರು ಇಕ್ಕಟ್ಟಿಗೆ ಸಿಲುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿರುವ ಪ್ರೈಮರಿ ಹಾಗೂ ಸೆಕೆಂಡರಿ ವಿದ್ಯುತ್ ತಂತಿಗಳು ಹಾದು ಹೋಗಿರುವ ವಿದ್ಯುತ್ ಕಂಬಗಳು ವಾಲಿದ್ದು, ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಇಲ್ಲಿ ರೈತರ ಜಮೀನುಗಳೇ ಹೆಚ್ಚಾಗಿವೆ. ಕಬ್ಬಿನ ಲಾರಿ ಹಾಗೂ ಟ್ರ್ಯಾಕ್ಟರ್‌ಗಳು ಈ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತವೆ. ಈ ರಸ್ತೆಯಲ್ಲಿ ಎರಡು ಕಡೆ ತೀವ್ರ ತಿರುವುಗಳಿವೆ. ಕಬ್ಬಿನ ಲೋಡ್ ಹೆಚ್ಚು ತುಂಬುವುದರಿಂದ ವಾಲಿರುವ ವಿದ್ಯುತ್ ಕಂಬದ ತಂತಿ ವಾಹನಕ್ಕೆ ಸ್ಪರ್ಶಿಸಿದರೆ ದೊಡ್ಡ ಅಪಾಯವಾಗುವ ಸಂಭವವಿದೆ.
ಇದರೊಂದಿಗೆ ಇದರ ಕೆಳಗೆ ಜಾನುವಾರುಗಳು ನೀರು ಕುಡಿಯುವ ತೊಟ್ಟಿಯೂ ಇದೆ. ಕುರಿ, ದನಗಾಹಿಗಳು ಬಂದು ಇಲ್ಲಿ ನೀರು ಕುಡಿಸುತ್ತಾರೆ. ಹರಿಯುವ ನೀರು ವಿದ್ಯುತ್ ಕಂಬದ ಬುಡಕ್ಕೂ ಹೋಗುತ್ತದೆ. ಹಾಗಾಗಿ, ವಾಲಿರುವ ಕಂಬ ಮತ್ತಷ್ಟು ವಾಲಿ ಅಪಾಯವಾಗುವ ಸಾಧ್ಯತೆ ಇದ್ದು, ಜನ, ಜಾನುವಾರುಗಳ ಪ್ರಾಣಕ್ಕೆ ಕಂಕಟವಾಗುವ ಸಾಧ್ಯತೆಯೇ ಅಧಿಕವಾಗಿದೆ.
ಸೆಸ್ಕ್ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ: ಹಲವು ಬಾರಿ ಈ ಬಗ್ಗೆ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಂಬಗಳನ್ನು ರಸ್ತೆಯಿಂದ ದೂರಕ್ಕೆ ವರ್ಗಾಯಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಈ ಸಮಸ್ಯೆ ಕಳೆದ ಆರು 6 ತಿಂಗಳಿಂದಲೂ ಇದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ಕ್ರಮ ವಹಿಸಿಲ್ಲ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಸೇರಿದಂತೆ ಗ್ರಾಮಸ್ಥರ ಆಗ್ರಹವಾಗಿದೆ.