ಅಪಾಯಕ್ಕೆ ಆಹ್ವಾನಿಸುತ್ತಿವೆ ವಿದ್ಯುತ್ ಕಂಬ

HNL POWER POLL
Published on

ಹಾನಗಲ್ಲ: ವಿದ್ಯುತ್ ಅವಘಡಗಳಿಗೆ ಆಹ್ವಾನ ನೀಡುತ್ತಿರುವ ತಾಲೂಕಿನ ಮಾಸನಕಟ್ಟಿ ಗ್ರಾಪಂ ವ್ಯಾಪ್ತಿಯ ವಳಗೇರಿ ಗ್ರಾಮದಲ್ಲಿ ಆರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಶಿಥಿಲಾವಸ್ಥೆ ತಲುಪಿದ್ದು, ಸಾರ್ವಜನಿಕರಿಗೆ ಜೀವಭಯ ಹುಟ್ಟಿಸುತ್ತಿವೆ.

ವಳಗೇರಿ ಗ್ರಾಮದ ಜನನಿಬಿಡ ಪ್ರದೇಶದಲ್ಲಿರುವ ವಿದ್ಯುತ್ ಕಂಬಗಳ ಮೇಲಿನ ಸಿಮೆಂಟ್ ಉದುರಿ ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಕಾಣುತ್ತಿವೆ. ಜೋರಾದ ಗಾಳಿ ಬಂದರೆ ಬೀಳುವ ಹಂತ ತಲುಪಿವೆ. ಇಷ್ಟಾದರೂ ಹೆಸ್ಕಾಂ ಅಧಿಕಾರಿಗಳು ಇದನ್ನು ಗಮನಿಸುತ್ತಿಲ್ಲ.

ಈ ಕುರಿತಂತೆ ಗ್ರಾಮ ಪಂಚಾಯಿತಿಯಿಂದ ಮನವಿಗಳನ್ನೂ ಸಲ್ಲಿಸಿ ವಿನಂತಿಸಲಾಗಿದೆ. ಇದರೊಂದಿಗೆ ಶಿಥಿಲಗೊಂಡ ವಿದ್ಯುತ್ ಕಂಬಗಳ ಜಿಪಿಎಸ್ ಫೋಟೋಗಳನ್ನೂ ಸಲ್ಲಿಸಲಾಗಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ವಿದ್ಯುತ್ ಕಂಬಗಳನ್ನು ಹಾಕಿ ಸುಮಾರು 40 ವರ್ಷಗಳು ಗತಿಸಿವೆ. ಪ್ರತಿದಿನ ಶಾಲಾ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಆದರೆ, ಮುಂದಾಗುವ ಅನಾಹುತಗಳನ್ನು ತಪ್ಪಿಸುವ ಆಲೋಚನೆ ಅಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ ಎಂದು ಗ್ರಾಮಸ್ಥರು, ಗ್ರಾಪಂ ಸದಸ್ಯರು ಆರೋಪಿಸಿದ್ದಾರೆ.

ಕೂಡಲೇ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಅವಘಡಗಳಿಗೆ ಅವಕಾಶವಾಗದಂತೆ ಕಂಬಗಳನ್ನು ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ.

ವಳಗೇರಿ ಗ್ರಾಮದಲ್ಲಿ ಶಿಥಿಲಾವಸ್ಥೆ ತಲುಪಿದ ಆರು ವಿದ್ಯುತ್ ಕಂಬಗಳನ್ನು ಬದಲಾಯಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಜಿಪಿಎಸ್ ಫೋಟೋಗಳನ್ನೂ ಸಲ್ಲಿಸಿ ಮನವರಿಕೆ ಮಾಡಿದ್ದೇವೆ. ಲೈನ್​ವುನ್ ಕೂಡ ಕಂಬಗಳ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ಇದಾಗಿ ವರ್ಷಗಳು ಗತಿಸಿದ್ದರೂ ಬೀಳುವ ಹಂತ ತಲುಪಿದ ಕಂಬಗಳನ್ನು ಬದಲಿಸಲು ಮನಸು ಮಾಡುತ್ತಿಲ್ಲ. ಮುಂಜಾಗ್ರತೆ ವಹಿಸಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು.

| ಸಿ.ಎಂ. ಹಳ್ಳಿಕೊಪ್ಪದಮಠ, ಮಾಸನಕಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net