

ಹಾವೇರಿ: ಯಾಲಕ್ಕಿ ನಗರಿ ಹಾವೇರಿ ಶಹರ, ಹಾನಗಲ್ಲ, ರಾಣೆಬೆನ್ನೂರ, ಶಿಗ್ಗಾಂವಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರವೂ ಕೆಲಕಾಲ ಭಾರಿ ಗಾಳಿ ಸಹಿತ ಮಳೆ ಸುರಿದಿದೆ. ಜಿಲ್ಲೆಯ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಹಾನಗಲ್ಲ ತಾಲೂಕಿನ ಹೆರೂರು ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ರಭಸವಾದ ಗಾಳಿ ಜತೆಗೆ ಮಳೆ ಸುರಿದ ಪರಿಣಾಮ ಮೆಕ್ಕೆಜೋಳ, ಅಡಕೆ, ಬಾಳೆ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗುವ ಆತಂಕ ರೈತರಲ್ಲಿ ಎದುರಾಗಿದೆ.
ತಾಲೂಕಿನ ಕಬ್ಬೂರ ಗ್ರಾಮದಲ್ಲಿ ಜೋರಾದ ಗಾಳಿಯ ರಭಸಕ್ಕೆ 110 ಕೆವಿ ಸಾಮರ್ಥ್ಯದ ಹೈವೋಲ್ಟೇಜ್ನ ಬೃಹತ್ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಗಾಳಿಯಿಂದ ಹಲವೆಡೆ ಅನಾಹುತ ಸಂಭವಿಸಿದ್ದು, ಅಧಿಕಾರಿಗಳು ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಶಿಗ್ಗಾಂವಿ ವರದಿ
ಧಾರಾಕಾರ ಮಳೆ ಸುರಿದಿದ್ದರಿಂದ ಪಟ್ಟಣದ ಹಲವು ಬಡಾವಣೆಗಳಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿದು ಜನ-ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದ ಸಂಪರ್ಕ ಕಲ್ಪಿಸುವ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಯ ಮೇಲೆಯೇ ಕೊಳಚೆ ನೀರು ಹರಿಯಿತು.