ಅಪಾಯಕ್ಕೆ ಆಹ್ವಾನ ನೀಡುತ್ತಿವೆ ವಿದ್ಯುತ್ ಕಂಬಗಳು

21-KGL-1,,
Published on

ಪಟ್ಟಣದೆಲ್ಲೆಡೆ ಶಿಥಿಲಗೊಂಡು ಬಾಗಿ ನಿಂತ ಪೋಲ್‌ಗಳು

ಕೊಳ್ಳೇಗಾಲ : ಪಟ್ಟಣದ ಹಲವೆಡೆ ವಿದ್ಯುತ್ ಕಂಬಗಳು ಬಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಈ ಅನಾಹುತ ಸಂಭವಿಸುವ ಮುನ್ನ ಕಂಬಗಳನ್ನು ಬದಲಾಯಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕೆ ಯಾವಾಗ ಉರುಳುವುದೋ ಗೊತ್ತಿಲ್ಲ. ಜೋರಾಗಿ ಗಾಳಿ ಬೀಸಿದರೆ ಕಂಬಗಳು ಬೀಳುವ ಸಾಧ್ಯತೆಗಳಿವೆ. ಕಂಬಗಳ ತಳಭಾಗದಲ್ಲಿ ಸಿಮೆಂಟ್ ಉದುರಿದೆ. ಒಳಗಿನ ಕಬ್ಬಿಣ ಕಾಣಿಸುತ್ತಿದೆ. ಮುರಿದು ಬೀಳುವ ಆತಂಕ ಇದೆ. ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಮಸೀದಿ ವೃತ್ತದ ಬಳಿ ಮಯೂರ ಪ್ರಾವಿಷನ್ ಸ್ಟೋರ್ ಪಕ್ಕದಲ್ಲಿ ವಿದ್ಯುತ್ ಕಂಬ ಶಿಥಿಲಾವಸ್ಥೆ ತಲುಪಿದೆ. ಬುಡದಲ್ಲಿ ಸಿಮೆಂಟ್ ಕಿತ್ತುಹೋಗಿದ್ದು ಕಬ್ಬಿಣದ ಸರಳುಗಳು ಕಾಣಿಸುತ್ತಿದೆ. ಬಿಲ್ಡಿಂಗ್ ಕಡೆಗೆ ಬಾಗಿದು ಆತಂಕ ಸೃಷ್ಟಿಸಿದೆ. ಕಂಬದ ಸಮೀಪವೇ ಹೂವು ಅಂಗಡಿ, ಬೇಕರಿ, ಹಣ್ಣಿನ ಅಂಗಡಿ ಇದೆ. ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ದಟ್ಟವಾಗಿದ್ದು, ಅಪಾಯದ ಅಂಚಿನಲ್ಲಿರುವ ಕಂಬ ಬದಲಾವಣೆ ಮಾಡಿಕೊಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ.

ಬೆಂಗಳೂರು ರಸ್ತೆಯಲ್ಲಿರುವ ಐಇಎಲ್‌ಸಿ ಪ್ರಾಥಮಿಕ ಶಾಲೆಯ ಮುಂಭಾಗ ರಸ್ತೆಯಲ್ಲಿರುವ ಚರಂಡಿಯೊಳಗಿರುವ ವಿದ್ಯುತ್ ಕಂಬ ಸುಸ್ಥಿತಿಯಲ್ಲಿಲ್ಲ. ಕಂಬದ ಬುಡದಲ್ಲಿ ಬಿರುಕು ಬಿಟ್ಟಿದ್ದು ಕಬ್ಬಿಣ ಸಹಾಯದಿಂದ ಮಾತ್ರ ಕಂಬ ನಿಂತಿದೆ. ಮಳೆ ಹಾಗೂ ಗಾಳಿ ಬೀಸಿದರೆ ನಿವಾಸಿಗಳು ರಸ್ತೆಗೆ ಬರುವುದೇ ಇಲ್ಲ. ಒಂದು ವೇಳೆ ಗಾಳಿ ಬೀಸಿದಲ್ಲಿ ಕಂಬ ಬಿದ್ದು ಅನಾಹುತ ಸೃಷ್ಟಿಯಾಗುವುದೋ ಎಂಬ ಆತಂಕ ಇಲ್ಲಿನವರಲ್ಲಿ ಮನೆ ಮಾಡಿದೆ.

ಇನ್ನು 3ನೇ ವಾರ್ಡ್‌ನ ಭೀಮನಗರದ ಹೆಬ್ಬಾಗಿಲಿನ ಪಕ್ಕದಲ್ಲಿ ಹಳೇ ಕಂಬವೊಂದು ಬಿರುಕು ಬಿಟ್ಟಿದೆ. ಅಲ್ಲೇ ಸಮೀಪದ ಹೊಸ ಬೀದಿಯ ಪ್ರತಾಪ್ ಅವರ ಮನೆಯ ಮುಂಭಾಗ ಕಂಬದ ಬುಡದಲ್ಲೂ ಬಿರುಕು ಬಿದ್ದಿವೆ. ಕಂಬದ ಅಕ್ಕಪಕ್ಕ ಮನೆಗಳಿದ್ದು ನಿವಾಸಿಗಳಿಗೆ ಕಂಬ ಬೀಳುವ ಭೀತಿ ಎದುರಾಗಿದೆ. ಪೀಸ್ ಪಾರ್ಕ್ ಮುಖ್ಯ ರಸ್ತೆಯಲ್ಲಿರುವ ಟ್ರ್ಯಾಕ್ಟರ್ ಶೋರೂಂ ಪಕ್ಕದಲ್ಲಿರುವ ಕಂಬವೊಂದು ಕಾಮನ ಬಿಲ್ಲಿನಂತೆ ಬಾಗಿದೆ. ಬಸ್ತೀಪುರ ರಸ್ತೆಯಿಂದ ಕೆಎಸ್‌ಡಿಸಿ ಸ್ಕ್ಯಾನಿಂಗ್ ಸೆಂಟರ್ ತಿರುವಿನಲ್ಲಿರುವ ಎರಡು ವಿದ್ಯುತ್ ಕಂಬಗಳ ಪೈಕಿ ಒಂದು ಕಂಬ ಬುಡದಲ್ಲಿ ಸಿಮೆಂಟ್ ಉದುರಿ ಹೋಗಿದ್ದು ಕಬ್ಬಿಣ ಕಾಣುತ್ತಿದೆ.

ಬಸವೇಶ್ವರನಗರ, ಶಿವಕುಮಾರ್ ಸ್ವಾಮೀಜಿ ಬಡಾವಣೆ, ಸಾಯಿ ಬಾಬಾ ದೇವಾಲಯ ಅಕ್ಕಪಕ್ಕದ ಕೆಲವು ಕಂಬಗಳು ಶೋಚನೀಯ ಸ್ಥಿತಿಯಲ್ಲಿದ್ದು ಬಲಿಗಾಗಿ ಕಾದಿರುವಂತಿದೆ. ಇನ್ನಾದರೂ ಸೆಸ್ಕ್ ಅಧಿಕಾರಿಗಳು ಹಳೇಯ ಹಾಗೂ ಯೋಗ್ಯವಲ್ಲದ ಕಂಬಗಳನ್ನು ಬದಲಾಯಿಸಲು ಮುಂದಾಗಬೇಕು. ಈ ಅವ್ಯವಸ್ಥೆಯಿಂದ ಸಾವು-ನೋವುಗಳಾದರೆ ಸೆಸ್ಕ್ ಹೊಣೆಯಾಗುವುದೇ ಎಂದು ಪ್ರಶ್ನಿಸುತ್ತಿದ್ದಾರೆ.

ಮಾಹಿತಿ ಇದ್ದರೂ ನಿರ್ಲಕ್ಷ್ಯ: ವಿದ್ಯುತ್ ಕಂಬಗಳು ಬಿರುಕು ಬಿಟ್ಟಿರುವುದು, ಬಾಗಿರುವುದು ಹಾಗೂ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬಗ್ಗೆ ನಿವಾಸಿಗಳು ಆಯಾ ಬಡಾವಣೆಗೆ ಬರುವ ಲೈನ್‌ಮನ್‌ಗಳಿಗೆ ಮಾಹಿತಿ ನೀಡಿದ್ದಾರೆ. ಸೆಸ್ಕ್ ಜೆಇ, ಎಇಇಗಳಿಗೂ ಈ ವಿಷಯ ತಿಳಿದಿದೆ. ಆದರೆ ಕಂಬ ಬದಲಿಸುವ ಕಾರ್ಯಕ್ಕೆ ಮಾತ್ರ ಮುಂದಾಗಿಲ್ಲ.

ಮಳೆಗಾಲದಲ್ಲಿ ಅನಾಹುತ ಹೆಚ್ಚು: ಈಗಾಗಲೇ ಪೂರ್ವ ಮುಂಗಾರು ಮುಂಗಡವಾಗಿ ಅಬ್ಬರಿಸುತ್ತಿದೆ. ಸಂಜೆ ಆಗುತ್ತಿದ್ದಂತೆ ಗುಡುಗು ಸಹಿತ ಮಳೆಯಾಗುತ್ತಿದೆ. ಗಾಳಿಯು ಹೆಚ್ಚಿರುತ್ತದೆ. ಸಾಧಾರಣ ಗಾಳಿಮಳೆ ಬಂದರೂ ದುರಂತ ಸಂಭವಿಸುವುದು ಖಚಿತ. ಮಳೆ ಮತ್ತು ಗಾಳಿಗೆ ಸದೃಢವಾಗಿರುವ ಕಂಬಗಳೇ ನೆಲಕ್ಕೆ ಉರುಳುತ್ತವೆ. ಹೀಗಿರುವಾಗ ಬಿರುಕು ಬಿಟ್ಟಿರುವ ಹಾಗೂ ಬಾಗಿರುವ ಕಂಬಗಳಿಂದ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಸೆಸ್ಕ್ ಅಧಿಕಾರಿಗಳು ಸಾರ್ವಜನಿಕರ ದೂರಿಗೆ ಆದ್ಯತೆ ನೀಡಬೇಕು. ಕೂಡಲೇ ಯೋಗ್ಯವಲ್ಲದ ಕಂಬಗಳನ್ನು ಬದಲಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ನಮ್ಮ ಅಂಗಡಿ ಮುಂದೆ ಇರುವ ವಿದ್ಯುತ್ ಕಂಬ ಶಿಥಿಲವಾಗಿದೆ. ಈಗಾಗಲೇ ಈ ಬಗ್ಗೆ ಸೆಸ್ಕ್ ಜೆಇ ಅವರಿಗೂ ಮಾಹಿತಿ ನೀಡಿದ್ದೇನೆ. ಕಂಬವನ್ನು ತೆರವುಗೊಳಿಸಿ ಬದಲಿ ಕಂಬ ಹಾಕಿ ಕೊಡಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಂಬದ ಬುಡದಲ್ಲಿ ಕಬ್ಬಿಣ ಕಾಣುತ್ತಿದೆ. ಜನನಿಬಿಡ ಸ್ಥಳ ಇದಾಗಿದ್ದು ಯಾವಾಗ ಬಿದ್ದು ಯಾರ ಜೀವ ತೆಗೆಯುವುದೊ ಎಂಬ ಆತಂಕ ಮನೆ ಮಾಡಿದೆ. ಸೆಸ್ಕ್ ಅಧಿಕಾರಿಗಳು ಜನರ ಪ್ರಾಣದ ಜತೆ ಚೆಲ್ಲಾಟವಾಡದೆ ಕಂಬ ಬದಲಿಸಿಕೊಡಬೇಕು.

ಕರಣ್ ಮಾಲೀಕ, ಪ್ರಾವಿಷನ್ ಸ್ಟೋರ್, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net